Tuesday, April 9, 2024

ನನ್ನ ಹೊಸ ಪುಸ್ತಕ : ಅನುವಾದ "ಚಿಗುರಿನ ಚೇತನ ರಾವ್ ಬಹದ್ದೂರ್ ಎಚ್.ಸಿ.ಜವರಾಯ"

  



ನನ್ನ ಹೊಸ ಪುಸ್ತಕ : ಅನುವಾದ "ಚಿಗುರಿನ ಚೇತನ ರಾವ್ ಬಹದ್ದೂರ್ ಎಚ್.ಸಿ.ಜವರಾಯ"  ಈಗಷ್ಟೇ ಪ್ರಕಟವಾಗಿದೆ. ಪ್ರಕಾಶಕರು ಆದಿಚುಂಚನಗಿರಿ ವಿಶ್ವವಿದ್ಯಾಲಯದ ವಿಕಸನ ಸಂಸ್ಥೆ.

ಅನುವಾದಕರ ಮಾತಿನಿಂದ..........

ಪ್ರಕೃತಿಯ ಮಡಿಲಲ್ಲಿ ವಿಕಾಸ ಹೊಂದಿದ ಹಾಗೂ ಪ್ರಕೃತಿಯ ಭಾಗವೇ ಆಗಿರುವ ಮಾನವ ಆಧುನಿಕ ಮಾನವನಾಗಿ ತನ್ನ ಸುತ್ತಮುತ್ತಲೂ ಕಾಂಕ್ರೀಟ್ ಜಗತ್ತನ್ನು ನಿರ್ಮಿಸಿಕೊಂಡು ಅದರ ನಡುವೆ ಹಸಿರನ್ನು ಅರಸುವಅದನ್ನು `ಸೃಷ್ಟಿ'ಸುವ ಅವನ ಪ್ರಯತ್ನ ಪ್ರಕೃತಿಯ ಅಣಕವೂ ಹೌದುಉದ್ಯಾನವನಗಳಹಸಿರು ಗಿಡಮರಗಳ ಆಹ್ಲಾದ ನೀಡುವ ಅನುಭವಗಳ ಉಲ್ಲೇಖ ಮಾನವನ ಮೌಖಿಕ ಪುರಾಣಗಳ ಕಾಲದಿಂದ ಹಿಡಿದು ಪ್ರಾಚೀನ ಚರಿತ್ರೆ ಹಾಗೂ ವರ್ತಮಾನಗಳ ಸಮಯದಲ್ಲೂ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆನಗರ ವಿನ್ಯಾಸಗಳ ಬಹುಮುಖ್ಯ ಅಂಶ ಉದ್ಯಾನವನಗಳಿಗೆ ಮೀಸಲಿರಿಸುವುದಾಗಿದೆ (ಹಣದ ಆಸೆಗಾಗಿ ಅವುಗಳನ್ನು ಒತ್ತುವರಿ ಮಾಡುವುದುಗೋಪ್ಯವಾಗಿ ಮರಗಳನ್ನು ಕಡಿಯುವುದು ಸಹ ನಾಗರಿಕತೆಯ ಭಾಗವೇ ಆಗಿದೆ!).

ಕೃಷಿ ವಿಶ್ವವಿದ್ಯಾಲಯದಲ್ಲಿ ನನ್ನ ಕೃಷಿ ವಿಜ್ಞಾನದ ವ್ಯಾಸಂಗದ ಭಾಗವಾಗಿ ತೋಟಗಾರಿಕೆಯನ್ನೂ ಸಹ ನಾನು ವ್ಯಾಸಂಗ ಮಾಡಿದೆನಮ್ಮ ವ್ಯಾಸಂಗದ ಭಾಗವಾಗಿ ಲಾಲ್ಬಾಗ್ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಸ್ಥೆಗಳಿಗೂ ಸಹ ನಮ್ಮನ್ನು ಕರೆದೊಯ್ಯಲಾಗಿತ್ತುಆದರೆ ವಿಪರ್ಯಾಸವೆಂದರೆ ನಮಗೆ ಪಾಠ ಮಾಡಿದ ಅಧ್ಯಾಪಕರು ಯಾರೂ  ತಮ್ಮ ಬೋಧನೆಯಲ್ಲಿ  ಉದ್ಯಾನವನದಲ್ಲಿ ನೆಲೆಸಿ ಸೇವೆ ಸಲ್ಲಿಸಿದ ಹಾಗೂ ಮತ್ತು ಸಂಸ್ಥೆಯ ಸ್ಥಾಪನೆಗೆ ಕಾರಣರಾದ ಜವರಾಯನವರ ಹೆಸರನ್ನು ಒಮ್ಮೆಯಾದರೂ ಉಲ್ಲೇಖಿಸಿರಲಿಲ್ಲಅಷ್ಟಲ್ಲದೆ ಜವರಾಯನವರ ತಮ್ಮನಾದ ಎಚ್.ಸಿ.ಗೋವಿಂದುರವರು ನನ್ನ ವ್ಯಾಸಂಗದ ಸಮಯದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಸ್ಯರೋಗಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು ಹಾಗೂ ಶಿಕ್ಷಣ ನಿರ್ದೇಶಕರೂ ಸಹ ಆಗಿದ್ದರು.

ಜವರಾಯನವರನ್ನು ನನಗೆ ಮೊದಲು ಪರಿಚಯಿಸಿದವರು ಹಿರಿಯ ತೋಟಗಾರಿಕೆ ತಜ್ಞರಾದ ಎಸ್.ನಾರಾಯಣಸ್ವಾಮಿಯವರುಅವರು ಹಾಗೂ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದ ಡಾ.ಎಸ್.ವಿ.ಹಿತ್ತಲಮನಿಯವರು ಜವರಾಯನವರ ಬದುಕು ಹಾಗೂ ಕೊಡುಗೆಯ ಬಗೆಗೆ ಮಾಹಿತಿ ಸಂಗ್ರಹಿಸಿ ಲಾಲ್ಬಾಗ್ ಮೈಸೂರು ತೋಟಗಾರಿಕೆ ಸಂಘದಿಂದ ಕಿರುಹೊತ್ತಿಗೆಯೊಂದನ್ನು 1996ರಲ್ಲೇ ಪ್ರಕಟಿಸಿದ್ದರುಅದರ ಪ್ರತಿಯೊಂದನ್ನು ಎಸ್.ನಾರಾಯಣಸ್ವಾಮಿಯವರು ನನಗೆ ನೀಡಿ ಅವರನ್ನು ನನಗೆ ಪರಿಚಯಿಸಿದರು.

ನನ್ನ ಪತ್ನಿ ರೇಣುಕಾ ಭಾರತದ ರಾಷ್ಟ್ರೀಯ ಮಹಿಳಾ ಮಂಡಳಿಯ (ನ್ಯಾಶನಲ್ ಕೌನ್ಸಿಲ್ ಫಾರ್ ವಿಮೆನ್ ಇನ್ ಇಂಡಿಯಾಕರ್ನಾಟಕ ಶಾಖೆಯ ಜಂಟಿ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಮಂಡಳಿಯ ಸದಸ್ಯಳಾಗಿದ್ದು ಅದರ ರಾಷ್ಟ್ರೀಯ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಜಯಾ ಪದ್ಮನಾಭ್ರವರ ಮೂಲಕ ಅವರ ಪತಿ ಶ್ರೀ ಹರೀಶ್ ಪದ್ಮನಾಭರವರ ಪರಿಚಯವಾಯಿತುಒಂದು ದಿನ ಅವರು ಅವರು ತೋಟಗಾರಿಕೆ ತಜ್ಞ ಜವರಾಯನವರ ಕುರಿತ ಪುಸ್ತಕವೊಂದು ಡಾಮೀರಾ ಅಯ್ಯರ್ರವರು ಬರೆದಿದ್ದು ಅದರ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನಿಸಿದರುಆಗ ನನಗೆ ತಿಳಿದದ್ದು ಶ್ರೀ ಹರೀಶ್ ಪದ್ಮನಾಭರವರು ಜವರಾಯನವರ ಮೊಮ್ಮಗನೆಂದುಅತ್ಯಂತ ಸಂತೋಷದಿಂದ ನಾನು  ಕೃತಿಯ ಬಿಡುಗಡೆ ಮತ್ತು ಚರ್ಚೆಯ ಕಾರ್ಯಕ್ರಮಕ್ಕೆ ಹಾಜರಿದ್ದು ಒಂದು ಪ್ರತಿಯನ್ನು ತಂದು ಆಸಕ್ತಿಯಿಂದ ಓದಿದೆಇದುವರೆಗೆ ಜವರಾಯನವರ ಬಗ್ಗೆ ಅಷ್ಟು ಸುದೀರ್ಘ ಸಂಶೋಧನೆಅಧ್ಯಯನದ ಕೃತಿ ಯಾವುದೂ ಬಂದಿಲ್ಲಡಾ.ಮೀರಾ ಅಯ್ಯರ್ರವರು ಜವರಾಯನವರ ಬದುಕು ಹಾಗೂ ಅವರ ತೋಟಗಾರಿಕೆ ಹಾಗೂ ಉದ್ಯಾನವನ ಕ್ಷೇತ್ರಕ್ಕೆಬೆಂಗಳೂರುಮೈಸೂರುಗಳ ಉದ್ಯಾನವನಗಳ ಸ್ಥಾಪನೆಅಭಿವೃದ್ಧಿಯ ಬಗೆಗಿನ ಅವರ ಕೊಡುಗೆಯ ಕುರಿತು ಆಳವಾದ ಅಧ್ಯಯನ ನಡೆಸಿದೇಶ ವಿದೇಶಗಳ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಕೃತಿ ರಚಿಸಿದ್ದಾರೆ.

ಶ್ರೀ ಹರೀಶ್ ಪದ್ಮನಾಭರವರು ಹಾಗೂ ಆದಿಚುಂಚನಗಿರಿ ವಿಶ್ವವಿದ್ಯಾಲಯದ ವಿಕಸನ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಎಂ.ಜಿ.ಚಂದ್ರಶೇಖರಯ್ಯನವರು  ಕೃತಿಯನ್ನು ಕನ್ನಡಕ್ಕೆ ಅನುವಾದಿಸಿಕೊಡಲು ಹೇಳಿದಾಗ ಸಂತೋಷದಿಂದ ಅನುವಾದಿಸಿದ್ದೇನೆಶ್ರೀ ಜವರಾಯನವರ ಬದುಕು ಮತ್ತು ಕೊಡುಗೆಯನ್ನು ಕನ್ನಡಿಗರಿಗೆ ಪರಿಚಯಿಸುವುದು ಅಷ್ಟೇ ಹರ್ಷದಾಯಕ ಕೆಲಸವೂ ಹೌದು ಕೃತಿ  ನಿಟ್ಟಿನಲ್ಲಿ ಯಶಸ್ವಿಯಾಗುವುದೆಂಬ ಭರವಸೆ ನನಗಿದೆ.

ಡಾಜೆ.ಬಾಲಕೃಷ್ಣ


 

ನನ್ನ ಹೊಸ ಕೃತಿ ಪ್ರವಾಸ ಕಥನ "ನಡೆದಷ್ಟು ದೂರ"

 ನನ್ನ ಹೊಸ ಕೃತಿ ಹಾಗೂ ಪ್ರವಾಸ ಕಥನ "ನಡೆದಷ್ಟು ದೂರ" ಈಗಷ್ಟೇ ಪ್ರಕಟವಾಗಿದೆ. ಆ ಕೃತಿಗೆ ನಾನು ಬರೆದಿರುವ ಲೇಖಕರ ಮಾತು ಹಾಗೂ ಪ್ರವಾಸ ಕಥನ ಸಾಹಿತ್ಯದ ಪೀಠಿಕೆ, ಪರಿಚಯ ಇಲ್ಲಿದೆ.


 

ನಡೆದಷ್ಟು ದೂರ....

         ಮಾನವ ಒಂದೆಡೆ ಹೆಚ್ಚುಕಾಲ ನಿಲ್ಲುವವನಲ್ಲ. ಇಲ್ಲದಿದ್ದಲ್ಲಿ ಸುಮಾರು ಮೂರು ಲಕ್ಷ ವರ್ಷಗಳ ಹಿಂದೆ ಆಫ್ರಿಕಾದಲ್ಲಿ ವಿಕಾಸಗೊಂಡನೆಂದು ಹೇಳಲಾಗುವ ಆಧುನಿಕ ಮಾನವ ಇಂದು ವಿಶ್ವದೆಲ್ಲೆಡೆ ಪಸರಿಸಿರುತ್ತಿರಲಿಲ್ಲ. ಆದರೂ ಮಾನವನ ಎಲ್ಲ ಪ್ರಯಾಣಗಳೂ ಪ್ರವಾಸಗಳಲ್ಲ. ಇಂದೂ ಸಹ ಮಾನವ ಜಗತ್ತಿನಾದ್ಯಂತ ನಿರಂತರ ಚಲನೆಯಲ್ಲಿದ್ದಾನೆ- ಉದ್ಯೋಗ ಅರಸುವವನಾಗಿ, ನಿರಾಶ್ರಿತನಾಗಿ, ವ್ಯಾಪಾರಿಗಳಾಗಿ, ವಿಜ್ಞಾನಿಗಳಾಗಿ, ಸೈನಿಕರಾಗಿ. ಇವೆಲ್ಲವೂ ಬದುಕನ್ನು ಅರಸುವ ಚಲನೆಗಳಾಗಿವೆ.

         ಆದರೆ ಪ್ರವಾಸದಲ್ಲಿ ಮಾನವನಿಗೆ ಮೊದಲಿನಿಂದಲೂ ವಿಶಿಷ್ಟ ಆಸಕ್ತಿಯಿದೆ; ಅದೊಂದು ಬೌದ್ಧಿಕ ಹಂಬಲ, ವಿಸ್ಮಯಗಳನ್ನು, ಅಚ್ಚರಿಗೊಳಿಸುವಂಥವನ್ನು ಕಾಣಬೇಕೆಂಬ ಹಾಗೂ ಅನುಭವಿಸಬೇಕೆಂಬ ಕುತೂಹಲ ಮಾನವನ ವಿಕಾಸದ ಹಾದಿಯಲ್ಲಿ ಮೊದಲಿನಿಂದಲೂ ಕಂಡುಬಂದಿದೆ. ಅದೇ ರೀತಿ ತಾನು ಕಂಡದ್ದನ್ನು ವಿವರಿಸುವ, ನಿರೂಪಿಸುವ ಅವನ ಕಾರ್ಯವೂ ಸಹ ಅಷ್ಟೇ ಪ್ರಾಚೀನವಾದದ್ದು. ಭಾಷೆಯ ಆವಿಷ್ಕಾರದ ನಂತರ ಲಿಪಿಯ ಆವಿಷ್ಕಾರಕ್ಕೆ ಮೊದಲು ಮಾನವನ ಈ ರೀತಿಯ ತನ್ನೆಲ್ಲ ವಿವರಣೆಗಳು ಮೌಖಿಕವಾಗಿಯೇ ಇರುತ್ತಿದ್ದವು. ಹಲವಾರು ದಿನಗಳು ಬೇಟೆಗಾಗಿ ಅಥವಾ ಆಹಾರ ಅರಸಿ ದೂರ ಪ್ರದೇಶಗಳಿಗೆ ಹೋಗಿರುತ್ತಿದ್ದ ಮಾನವ ತಾನು ಹಿಂದಿರುಗಿದ ನಂತರ ತನ್ನ ಕುಟುಂಬಕ್ಕೆ, ಸಮುದಾಯಕ್ಕೆ ತಾವು ಕಂಡದ್ದನ್ನು, ಅನುಭವಿಸಿದ್ದನ್ನು ಸಂಜೆ ಬೆಂಕಿಯ ಸುತ್ತಲೂ ಕೂತು, ತಂದಿದ್ದ ಆಹಾರ ಸೇವಿಸುತ್ತಾ ವರ್ಣಿಸುತ್ತಿದ್ದ. ಬಹುಶಃ ಜಗತ್ತಿನ ಮೊಟ್ಟ ಮೊದಲ ಪ್ರವಾಸ ಕಥನಗಳು ಇವೇ ಆಗಿದ್ದವೆನ್ನಿಸುತ್ತದೆ. ಅವುಗಳನ್ನು ಆತ ತನ್ನ ಗುಹಾಚಿತ್ರಗಳಲ್ಲಿ ಚಿತ್ರಿಸಿರಲೂಬಹುದು.

         ಮಾನವನ ಹಾಗೂ ನಾಗರಿಕತೆಯ ವಿಕಾಸದ ಮುಂದಿನ ಹಂತದಲ್ಲಿ ರಾಜರು, ಸಾಮ್ರಾಟರು ಹಾಗೂ ಸೈನಿಕರು ತಮ್ಮ ಸಾಮ್ರಾಜ್ಯ ವಿಸ್ತರಣೆಗೆ, ಶತ್ರುಗಳ ಮೇಲಿನ ದಾಳಿಗೆ ಸಾವಿರಾರು ಮೈಲಿಗಳು ಪ್ರಯಾಣ ಮಾಡುತ್ತಿದ್ದರು. ಇಲ್ಲಿಯೂ ಸಹ ರಾಜರು, ಸೈನಿಕರು ಯುದ್ಧದಲ್ಲಿ ಬದುಕುಳಿದವರು ಹಿಂದಿರುಗಿದಾಗ ತಾವು ನೋಡಿದ ಹೊಸ ಸ್ಥಳಗಳ ವಿವರಣೆಗಳನ್ನು ನೀಡುತ್ತಿದ್ದರು ಹಾಗೂ ಹೊಸ ಸ್ಥಳಗಳಿಂದ ತಂದ `ಪ್ರವಾಸ ಸ್ಮರಣಿಕೆ'(ಸಾವೆನಿರ್)ಗಳನ್ನು ತಮ್ಮ ಕುಟುಂಬಗಳಿಗೆ, ಗೆಳೆಯರಿಗೆ ನೀಡುತ್ತಿದ್ದರು. ಕ್ರಮೇಣ ರಾಜರು ತಾವು ಯುದ್ಧಗಳಿಗೆ ಹೊರಟಾಗ ಹೊಸ ಸ್ಥಳಗಳ ವಿವರಗಳನ್ನು ದಾಖಲಿಸಲು ಕೆಲವರನ್ನು ಪ್ರತ್ಯೇಕವಾಗಿ ಕರೆದೊಯ್ಯತೊಡಗಿದರು.

         ಇಂದು ನಾವು ಒಂದು ಪ್ರದೇಶದ, ದೇಶದ, ಒಂದು ಸಮುದಾಯದ ಚರಿತ್ರೆಯನ್ನು, ಸಂಸ್ಕೃತಿಯನ್ನು ಅರಿಯಲು ಹಲವಾರು ಆಕರಗಳಿವೆ. ಅವುಗಳಲ್ಲಿ ಮುಖ್ಯವಾದುವು ಅಲ್ಲಿನ ಪುರಾಣಗಳು (ಉದಾಹರಣೆಗೆ, ಸುಮಾರು 4000 ವರ್ಷಗಳ ಹಿಂದೆ ಲಿಖಿತ ರೂಪದಲ್ಲಿ ರಚಿತವಾಗಿದೆಯೆನ್ನಲಾದ ಮೆಸಪೊಟೇಮಿಯಾದ ʻಗಿಲ್ಗಮೇಶ್ʼ ಪುರಾಣದಲ್ಲಿ ಗಿಲ್ಗಮೇಶ್ ಮತ್ತು ಎಂಕಿಡು ಸಿಡಾರ್ ಕಾಡಿಗೆ ಭೇಟಿ ನೀಡುವ ವೃತ್ತಾಂತವನ್ನು ಅತ್ಯಂತ ಪ್ರಾಚೀನ ಲಭ್ಯವಿರುವ ಲಿಖಿತ ಸಾಹಿತ್ಯವೆಂದು ಪರಿಗಣಿಸಲಾಗಿದೆ), ಸ್ಥಳದ ವೃತ್ತಾಂತವನ್ನು ತಿಳಿಸುವ ಗ್ರಂಥಗಳು (ಉದಾ: ಕ್ರಿ.ಶ. 1149-50ರಲ್ಲಿ ರಚಿತವಾಗಿದೆಯೆನ್ನಲಾದ ಕಾಶ್ಮೀರದ ಚರಿತ್ರೆಯನ್ನು ತಿಳಿಸುವ ಕಲ್ಹಣನ ʻರಾಜತರಂಗಿಣಿʼ), ನಾಣ್ಯಗಳು, ಶಾಸನಗಳು, ಸ್ಮಾರಕಗಳಂತಹ ಪ್ರಾಚ್ಯವಸ್ತು ಅವಶೇಷಗಳು ಹಾಗೂ ಬಹಳ ಮುಖ್ಯವಾಗಿ ಪ್ರವಾಸ ಕಥನಗಳು. ಇಂದು ನಾವು ಪ್ರಾಚೀನ ಭಾರತದ ಚರಿತ್ರೆ ಮತ್ತು ಸಂಸ್ಕೃತಿಯ ಚಿತ್ರಣವನ್ನು ನಾನಾಮೂಲಗಳಿಂದ ಕಟ್ಟಬೇಕಾಗಿದೆ. ದೂರದ ಗ್ರೀಸ್ ಮುಂತಾದ ಹಲವಾರು ದೇಶಗಳಿಂದ ನೂರಾರು ಪ್ರವಾಸಿಗಳು ಸುಮಾರು ಕ್ರಿ.ಪೂ. 500ರಿಂದ ಅಂದರೆ ಇಲ್ಲಿಗೆ 2500 ವರ್ಷಗಳಿಂದ ನಮ್ಮ ದೇಶಕ್ಕೆ ಬಂದು ತಾವು ಕಂಡು ಕೇಳಿದ ವಿಷಯಗಳನ್ನು ಬರೆದಿಟ್ಟು ಹೋಗಿರುವ ದಾಖಲೆಗಳೇ ಬಹುಮುಖ್ಯ ಆಕರಗಳಾಗಿವೆ. ಇದೇ 1964ರಲ್ಲಿ ಪ್ರಕಟವಾದ ಶ್ರೀ ಎಚ್.ಎಲ್.ನಾಗೇಗೌಡರ ಬೃಹತ್ ಸಂಪುಟ `ಪ್ರವಾಸಿ ಕಂಡ ಇಂಡಿಯಾ'ದ ವಸ್ತು ವಿಷಯವಾಗಿದೆ. ಗ್ರೀಸ್ ನ ಹೆರೊಡೋಟಸ್ ಮತ್ತು ಟೇಸಿಯಾಸ್ ರಿಂದ ಹಿಡಿದು ಅಲೆಕ್ಸಾಂಡರ್ ನ ಅವಧಿಯಲ್ಲಿ ಮೆಗಾಸ್ತನೀಸ್, ಟಾಲೆಮಿ, ಅರಬ್ಬಿ ಪ್ರವಾಸಿಗರಾದ ಸುಲೇಮಾನ್ ಮತ್ತು ಅಲ್ಮಸೂದಿ, ಐದನೇ ಶತಮಾನದಲ್ಲಿ ಚೀನಾದಿಂದ ಬಂದ ಫಾಹಿಯಾನ್, ಏಳನೇ ಶತಮಾನದಲ್ಲಿ ಬಂದ ಹುಯೆನ್‌ ತ್ಸಾಂಗ್, ಹತ್ತನೇ ಶತಮಾನದಲ್ಲಿ ಘಜ್ನಿಯ ಸುಲ್ತಾನ್ ಮಹಮೂದನ ಕಾಲದಲ್ಲಿ ಬಂದ ಅಲ್ಬೆರೂನಿ, ಹದಿಮೂರನೇ ಶತಮಾನದಲ್ಲಿ ಬಂದ ಮಾರ್ಕೊಪೋಲೋ, ನಂತರದ ಇಬನ್ ಬತೂತ, ಹದಿನೈದನೇ ಶತಮಾನದಲ್ಲಿ ಅಂದರೆ ವಿಜಯನಗರ ಸಾಮ್ರಾಜ್ಯ ಅಸ್ಥಿತ್ವದಲ್ಲಿದ್ದಾಗ ಇಟಲಿಯ ನಿಕೊಲೋ ಟಿಕಾಂಟಿ, ಹೇರಾತಿನ ಅಬ್ದುಲ್ ರಜಾಕ್, ರಷ್ಯಾ ದೇಶದ ನಿಕಿಟಿನ್, ಪೋರ್ಚುಗಲ್ಲಿನ ಬಾಬರೋಸಾ, ಹದಿನೇಳನೇ ಶತಮಾನದಲ್ಲಿ ಟಾವೆರ್ನಿಯರ್, ಥೇವನಾಟ್, ಹದಿನೆಂಟನೇ ಶತಮಾನದಲ್ಲಿ ಅಬ್ಬೆ ಡೂಬೆ ಮುಂತಾದವರು ತಮ್ಮ ಸ್ವಾರಸ್ಯದ, ಅಮೂಲ್ಯದ ಪ್ರವಾಸ ಕಥನಗಳನ್ನು ಬರೆದಿಟ್ಟು ಹೋಗಿದ್ದಾರೆ. ಈ ಕಥನಗಳಿಂದ ಇಂಡಿಯಾ ದೇಶದ ಕೇವಲ ರಾಜಕೀಯ ಚರಿತ್ರೆಯಷ್ಟೇ ಅಲ್ಲದೆ ಆಯಾಕಾಲದ ಸಾಮಾಜಿಕ, ನೈತಿಕ, ಆರ್ಥಿಕ, ವಾಣಿಜ್ಯ ವ್ಯಾಪಾರಗಳ ವಿಚಾರಗಳೂ ತಿಳಿಯುತ್ತವೆ. ಎಚ್.ಎಲ್.ನಾಗೇಗೌಡರ ಈ ಸಂಪುಟಕ್ಕೆ ಕುವೆಂಪುರವರು ಬರೆದಿರುವ ಮುನ್ನುಡಿಯಲ್ಲಿ ಅವರು ಹೇಳಿರುವಂತೆ, `ಈ ಪ್ರವಾಸಾನುಭವ ಕಥನಗಳಲ್ಲಿ ಒಮ್ಮೊಮ್ಮೆ ನಿರ್ಲಕ್ಷಿಸಬಹುದಾದ ತಪ್ಪು ಕಲ್ಪನೆ ನುಸುಳಬಹುದು, ಅತಿರೇಕಗಳು ಕಾಣಿಸಬಹುದು; ಆದರೆ ಒಟ್ಟಿನಲ್ಲಿ ಅವರ ಕಣ್ಣಿಗೆ ಕಂಡ ಆಯಾ ಕಾಲದ ಇಂಡಿಯಾ ದೇಶದ ನೈಜ ಚಿತ್ರಣ ಕಂಡುಬರುತ್ತದೆ. ಈ ಕಥನದ ಪುಟಗಳನ್ನು ತಿರುಹುವಾಗ, ಗತಕಾಲದ ಭಾರತೀಯ ಸಂಸ್ಕೃತಿಯ ವೈಭವದ ಚಿತ್ರಪಟವನ್ನು ನಮ್ಮ ಕಣ್ಮುಂದೆ ಸುರುಳಿ ಬಿಚ್ಚಿ ಹರಡಿದಂತೆ ಭಾಸವಾಗುತ್ತದೆ'.

         ಹಾಗಾಗಿ ಪ್ರವಾಸ ಕಥನ ಸಾಹಿತ್ಯದ ಒಂದು ಪ್ರಕಾರವಾಗಿ ವಿಶಿಷ್ಟವಾದುದು. ಏಕೆಂದರೆ ಅದು ಇತರ ಪ್ರಕಾರಗಳನ್ನೂ ತನ್ನಲ್ಲಿ ಒಳಗೊಳ್ಳುತ್ತದೆ - ಅದು ಚರಿತ್ರೆ, ಸಂಸ್ಕೃತಿ, ಕಲೆಯಲ್ಲದೆ, ಪುರಾಣಗಳ, ಸಾಹಸಗಾಥೆಗಳಂತಹ ಇತರ ಅಧ್ಯಯನ ಶಿಸ್ತುಗಳನ್ನು ಸಹ ಒಳಗೊಳ್ಳುತ್ತದೆ. ಪ್ರವಾಸ ಕಥನಗಳು ಜಗತ್ತಿನ ಇತರ ಸಂಪ್ರದಾಯ, ನಡವಳಿಕೆಗಳನ್ನು ಪರಿಚಯಿಸುತ್ತವೆ ಹಾಗೂ ವಿವಿಧ ಸಮಾಜಗಳ ನಡುವಿನ ಈ ಸಂಪ್ರದಾಯಗಳ ಭಿನ್ನತೆಗಳನ್ನು ಸಂಭ್ರಮಿಸುತ್ತವೆ, ಗತಕ್ಕೂ ವರ್ತಮಾನಕ್ಕೂ ಸೇತುವೆಗಳ ಹಾಗೆ ಕಾರ್ಯನಿರ್ವಹಿಸುತ್ತವೆ.

         ಶೇಕ್ಸ್‌ ಪಿಯರ್ ತನ್ನ `ಮರ್ಚಂಟ್ ಆಫ್ ವೆನೀಸ್' ಮತ್ತು `ರೋಮಿಯೋ ಜೂಲಿಯೆಟ್' ನಾಟಕಗಳ ಕಥಾವಸ್ತುಗಳ ಹಿನ್ನೆಲೆಯನ್ನು ಇಟಲಿಗೆ ಪ್ರಯಾಣ ಮಾಡದೆ, ಪ್ರವಾಸ ಕಥನಗಳ ಆಕರದಿಂದಲೇ ಪಡೆದನಂತೆ.

         ಇಂಥ ಸುದೀರ್ಘ ಇತಿಹಾಸ ಹೊಂದಿದ್ದರೂ ಸಹ ಪ್ರವಾಸ ಕಥನಗಳನ್ನು ಸಾಹಿತ್ಯ ಪ್ರಕಾರವಾಗಿ 15-16 ಶತಮಾನಗಳಲ್ಲಿ ಯೂರೋಪಿನ ತನ್ನ ವಸಾಹತು ಮತ್ತು ವ್ಯಾಪಾರದ ವಿಸ್ತರಣೆಗೆ ಮಾಹಿತಿ ಒದಗಿಸುವ ಒಂದು ಆಧುನಿಕ ಪ್ರಕಾರವೆಂದೇ ಪರಿಗಣಿಸಲ್ಪಟ್ಟಿದೆ. ಮುದ್ರಣ ತಂತ್ರಜ್ಞಾನವೂ ಅದಕ್ಕೆ ಕೊಡುಗೆ ನೀಡಿದೆ.

         ನನ್ನ ಹಲವಾರು ವರ್ಷಗಳ ಪ್ರವಾಸದಲ್ಲಿ ನಾನು ಕಂಡುದನ್ನು, ನನ್ನ ಅನುಭವಗಳನ್ನು, ಅಲ್ಲಿನ ಚರಿತ್ರೆ ಮತ್ತು ಸಂಸ್ಕೃತಿಯನ್ನು ಅರಿಯಲು ಪ್ರಯತ್ನಿಸಿ ಅವುಗಳನ್ನು ಇಲ್ಲಿ ದಾಖಲಿಸಲು ಪ್ರಯತ್ನಿಸಿದ್ದೇನೆ. ಇಲ್ಲಿರುವ ಎಲ್ಲ ಬರೆಹಗಳನ್ನೂ ನಾನು ಪ್ರವಾಸ ಕಥನಗಳೆಂದು ಹೇಳಲಾರೆ, ಆದರೆ ಅವು ನನ್ನ ಪ್ರವಾಸದ ಹಿನ್ನೆಲೆಯಿಂದ ರೂಪುಗೊಂಡ ಬರೆಹಗಳೇ ಆಗಿವೆ. ಈ ಬರೆಹಗಳಲ್ಲಿ ಬಳಸಿಕೊಂಡಿರುವ ಛಾಯಾಚಿತ್ರಗಳನ್ನು ನಾನೇ ತೆಗೆದದ್ದು ಹಾಗೂ ಕೆಲವನ್ನು ಇಂಟರ್ನೆಟ್ ನಿಂದ/ವಿಕಿಪೀಡಿಯಾ ಮುಂತಾದ ಆಕರಗಳಿಂದ ಪಡೆದಿದ್ದೇನೆ.

         ಇದರಲ್ಲಿನ ಲೇಖನಗಳಲ್ಲಿ ಬಹುಪಾಲು ಲೇಖನಗಳು ಇಡಿಯಾಗಿ ಇಲ್ಲವೇ ಸಂಕ್ಷಿಪ್ತ ರೂಪದಲ್ಲಿ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಆ ಪತ್ರಿಕೆಗಳ ಸಂಪಾದಕರಿಗೆ ನನ್ನ ಕೃತಜ್ಞತೆಗಳು. ನನ್ನ ಈ ಸಂಕಲನಕ್ಕೆ ಸುಂದರ ಹೆಸರನ್ನು ಸೂಚಿಸಿದ ಮಂಡ್ಯದ ಗೆಳೆಯ ರಾಜೇಂದ್ರ ಪ್ರಸಾದ್ ಗೆ ಧನ್ಯವಾದಗಳು. ಇದನ್ನು ಸುಂದರವಾಗಿ ಮುದ್ರಿಸಿದ ರಘು ಪ್ರಿಂಟ್ಸ್ ನ ರಘು ಮತ್ತು ಪದ್ಮನಾಭರೆಡ್ಡಿಯವರಿಗೂ ಸಹ ಧನ್ಯವಾದಗಳು.

ಜೆ.ಬಾಲಕೃಷ್ಣ

j.balakrishna@gmail.com

     

ಪ್ರತಿಗಳಿಗೆ ಸಂಪರ್ಕಿಸಿ: 

 j.balakrishna@gmail.com

 

 

 

Sunday, July 11, 2021

'ಮೌನ ವಸಂತ’ದಲ್ಲಿ ಮೊಳಗಿದ ಸ್ತ್ರೀ ಧ್ವನಿ

ನನ್ನ ಕೃತಿ 'ಮೌನ ವಸಂತ'ದ 'ಒಳನೋಟ':



'ಮೌನ ವಸಂತ’ದಲ್ಲಿ ಮೊಳಗಿದ ಸ್ತ್ರೀ ಧ್ವನಿ

ಎಚ್‌.ದಂಡಪ್ಪ


ಜೆ. ಬಾಲಕೃಷ್ಣ ಅವರ ‘ಮೌನ ವಸಂತ’ ಕೃತಿಯು ಅದೃಶ್ಯವಾಗಿ ಅರಳಿದ ಹತ್ತು ಮಹಿಳೆಯರ ಜೀವನ ಸಾಧನೆಗಳ ಕಥನವನ್ನು ಒಳಗೊಂಡಿದೆ. ಸಾಮಾನ್ಯವಾಗಿ ಮಹಿಳೆಯರನ್ನು ಮನರಂಜನೆಗೆಂದು, ಗಂಡಸಿನ ದೈಹಿಕ ಹಾಗೂ ಮಾನಸಿಕ ಸುಖಕ್ಕೆಂದು ದೇವರು ಸೃಷ್ಟಿ ಮಾಡಿದ್ದಾನೆ, ಆದ್ದರಿಂದ ಗಂಡಿನ ಅಡಿಯಾಳಾಗಿದ್ದುಕೊಂಡು ತನ್ನ ಸಾಧನೆಗಳನ್ನು ಗಂಡಿನ ಸಾಧನೆಗಳೆಂದು ಬಿಂಬಿಸುತ್ತಿರಬೇಕು ಎಂಬ ನಂಬಿಕೆ ಹುಟ್ಟುಹಾಕಲಾಗಿದೆ.

ಹೆಣ್ಣಿಗೂ ಒಂದು ವ್ಯಕ್ತಿತ್ವವಿದೆ, ಗೊತ್ತು ಗುರಿಗಳಿವೆ, ಅವಕಾಶ ಸಿಕ್ಕಿದರೆ ಅವರು ಎಲ್ಲಾ ಕ್ಷೇತ್ರಗಳಲ್ಲಿ ಪುರುಷರಷ್ಟೇ ಅವರಿಗಿಂತ  ಶ್ರೇಷ್ಠಮಟ್ಟದಲ್ಲಿ ಸಾಧನೆ ಮಾಡಬಲ್ಲರು. ಡಾಕ್ಟರ್‌ಗಳು, ಎಂಜಿನಿಯರ್‌ಗಳು, ವಕೀಲರು, ವಿಜ್ಞಾನಿಗಳು ಹೀಗೆ ತಮಗೊದಗಿದ ಅವಕಾಶಗಳನ್ನು ಬಳಸಿಕೊಂಡು ಯಶಸ್ವಿಯಾಗಿ  ಪ್ರಸಿದ್ಧರಾಗಿದ್ದಾರೆ. ಮತ್ತೆ ಕೆಲವರು ಎಲೆಮರೆಕಾಯಿಯಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿರುವವರೂ ಇದ್ದಾರೆ.

ಪುರುಷಪ್ರಧಾನ ವ್ಯವಸ್ಥೆಯಲ್ಲಿ ಇಂತಹ ಸಾಧನೆ ಮಾಡಿರುವವರ ಹೆಸರು ಬೆಳಕಿಗೆ ಬರದೆ ಇರುವ ಉದಾಹರಣೆಗಳು ಇವೆ. ಈ ಕೃತಿಯಲ್ಲಿ ಕ್ರಿಸ್ತಪೂರ್ವದಲ್ಲಿದ್ದ ಪೈಪೋಶಿಯಾ ಎಂಬ ಸಾಧಕಳಿಂದ ಹಿಡಿದು ಇಪ್ಪತ್ತನೇ ಶತಮಾದಲ್ಲಿದ್ದ ಲೇಖಕಿ ಇಸ್ಮತ್ ಚುಗ್ತಾಯ್‌ವರೆಗಿನ ಹೆಣ್ಣು ಮಕ್ಕಳ ಸಾಧನೆ ಸಿದ್ಧಿಗಳು, ಪುರುಷರ ಮೇಲರಿಮೆಯ ನಡುವೆಯೂ ಅವರು ಸಾಧಿಸಿದ ಸಾಧನೆಗಳು, ಬದುಕಿನ ವಿವರಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಡಿಎನ್‌ಎ ರಚನೆಯ ಸ್ವರೂಪದ ಕುರಿತು ಸಂಶೋಧನೆ ಮಾಡಿದ ರೊಸಾಲಿಂಡ್ ಫ್ರ್ಯಾಂಕ್ಲಿನ್ ತನ್ನ 37ನೇ ವಯಸ್ಸಿನಲ್ಲಿ ತೀರಿಕೊಳ್ಳುತ್ತಾಳೆ. ಡಿಎನ್‌ಎ ಕುರಿತ ಅವಳ ಸಂಶೋಧನೆಯನ್ನು ವಾಟ್ಸನ್ ಮತ್ತು ಕ್ರಿಕ್ ತಮ್ಮ ಸಂಶೋಧನೆಯೆಂದು ಬಿಂಬಿಸಿ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಾರೆ. ಇದು ಪುರುಷ ವಿಜ್ಞಾನಿಗಳು ರೊಸಾಲಿಂಡ್ ಅವರ ಬೌದ್ಧಿಕತೆಗೆ, ಜ್ಞಾನಕ್ಕೆ ಮಾಡಿದ ವಂಚನೆಯಾಗಿದೆ.

ರೇಚಲ್ ಕಾರ್ಸನ್, ನಾವು ಬಳಸುವ ಡಿಡಿಟಿ ಎಂಬ ರಾಸಾಯನಿಕವು ಮುಂದೆ ಇಡೀ ಜೈವಿಕ ಜಾಲವನ್ನೇ ಹಾಳುಮಾಡಿ ಮಾನವ ಕುಲವೇ ನಾಶವಾಗುವ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದವರು. ‘ಪ್ರಕೃತಿಯ ವಿರುದ್ಧ ಹೂಡುವ ಯುದ್ಧ, ಮನುಷ್ಯ ತನ್ನ ವಿರುದ್ಧ ತಾನೇ ಕೂಡಿಕೊಳ್ಳುವ ಯುದ್ಧ’ ಎಂದು ಹೇಳಿದಾಕೆ. ಅವರನ್ನು ಹುಚ್ಚಿ ಎಂದು ಕರೆಯಲಾಗುತ್ತದೆ. ಆಕೆ ಬರೆದ ‘ಮೌನ ವಸಂತ’ ಕೃತಿಯನ್ನು ಓದದಂತೆ ಜಾಗತಿಕ ಮಟ್ಟದ ಕಂಪನಿಗಳು  ಪಿತೂರಿ ಮಾಡುತ್ತವೆ.

‘ಸಾವಿನ ನೆರಳಲ್ಲಿ ಪುಟ್ಟ ಹಕ್ಕಿಯ ಹಾಡು’ ಹಿಟ್ಲರ್‌ನ ಜನಾಂಗೀಯ ದ್ವೇಷಕ್ಕೆ ಬಲಿಯಾದ ಆನ್ ಫ್ರಾಂಕ್ ಎಂಬ  15 ವರ್ಷದ ಬಾಲಕಿಯನ್ನು ಕುರಿತ ಬರಹ. ಈ ಬಾಲೆ ಲೇಖಕಿ, ಪತ್ರಕರ್ತೆಯಾಗಬೇಕೆಂಬ ಕನಸು ಕಂಡವಳು. ಆದರೆ ಆಕೆಯನ್ನು ಹಿಟ್ಲರ್‌ನ ಕ್ಯಾಂಪಿಗೆ ಎಳೆದೊಯ್ದು ಹಿಂಸೆ ನೀಡಿ ಸಾಯಿಸುತ್ತಾರೆ. ‘ಸಾವಿನ ನಂತರವೂ ಬದುಕುವ ಹಂಬಲ ನನ್ನದು’ ಎಂದು ತನ್ನ ‘ಡೈರಿ’ಯಲ್ಲಿ ಬರೆದಿಟ್ಟಿದ್ದಾಳೆ. ಈ ಬಾಲೆಯ ಕಥನವೂ ಇಲ್ಲಿದೆ. 20ನೇ ಶತಮಾನದ ಉರ್ದು ಲೇಖಕಿ ಇಸ್ಮತ್ ಚುಗ್ತಾಯ್ ಅವರು ‘ಲಿಹಾಫ್’ ಎಂಬ ಕತೆ ಬರೆದಾಗ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಹಲವಾರು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆದರೂ ತನ್ನ ಬರವಣಿಗೆಯನ್ನು ಮುಂದುವರಿಸಿ ಸಾಧನೆ ಮಾಡುತ್ತಾಳೆ.


14ನೇ ಶತಮಾನದಲ್ಲಿ ಕಾಶ್ಮೀರದಲ್ಲಿದ್ದ ಅನುಭಾವಿ ಕವಿ ಲಲ್ಲೇಶ್ವರಿ, ಕಪ್ಪು ಮಹಿಳೆ ಹನ್ರಿಟಾ ಲ್ಯಾಕ್ಸ್, ಅಲೆಕ್ಸಾಂಡ್ರಿಯಾದ ಹೇಪೇಶಿಯಾ ಸೂಸಾನ್ ಸೊಂತಾಗ್, ಮಾತಾಹರಿ ಇವರ ಸಾಧನೆಗಳನ್ನು ಬದುಕಿನ ಸ್ವರೂಪವನ್ನು ಕಥನದ ಸ್ವರೂಪದಲ್ಲಿ  ಕನ್ನಡದ ಓದುಗರಿಗೆ ಸಂಗ್ರಹಿಸಿ ಕೊಟ್ಟಿದ್ದಾರೆ. ಈ ಸಾಧಕಿಯರ ಬರವಣಿಗೆಯ ಕೆಲವು  ಪುಟಗಳ ಲೇಖನಗಳನ್ನು ಅನುವಾದಿಸಿ ಓದುಗರಿಗೆ ಕೊಟ್ಟಿದ್ದಾರೆ. ಇಲ್ಲಿನ ನಿರೂಪಣೆ ಬರವಣಿಗೆಯ ಶೈಲಿ ಸರಾಗವಾಗಿ ಓದಿಸಿಕೊಳ್ಳುತ್ತದೆ.

ಮೌನ ವಸಂತ– ಅದೃಶ್ಯವಾಗಿ ಅರಳಿದ ಮಹಿಳಾ ಕಥನಗಳು

ಲೇ: ಜೆ. ಬಾಲಕೃಷ್ಣ

ಪ್ರ: ಅವಿರತ ಪುಸ್ತಕ, ಬೆಂಗಳೂರು

For copies contact Roopa K. Mattikere : 9945010606

Wednesday, December 30, 2020

ಸಾವಿನ ನೆರಳಲ್ಲಿ ಪುಟ್ಟ ಹಕ್ಕಿಯ ಹಾಡು- ಆನ್‌ ಫ್ರಾಂಕ್

ಮನುಷ್ಯರ ಕ್ರೌರ್ಯಕ್ಕೆ ಮಿತಿಯೆಲ್ಲಿದೆ? ಕೆಲವೊಬ್ಬರ ಅಹಂಕಾರ ಹುಚ್ಚುತನ ಚರಿತ್ರೆಯ ದಿಕ್ಕನ್ನೇ ಬದಲಿಸಿಬಿಡುತ್ತದೆ. ಜರ್ಮನಿಯ ಹಿಟ್ಲರನ ಯೆಹೂದಿಗಳ ಬಗೆಗಿನ ಜನಾಂಗ ದ್ವೇಷ, ಆರ್ಯನ್ನರ ಹಿರಿತನದ ಹುಚ್ಚು, ಜಗತ್ತನ್ನೆಲ್ಲ ಗೆಲ್ಲಬೇಕೆಂಬ ದುರಾಸೆ ಕಾಲವನ್ನೇ ಬೆದರಿಸಿ ನಿಲ್ಲಿಸಿಬಿಟ್ಟಿತ್ತು. ಸುಂದರವಾದುದನ್ನು ಸೃಷ್ಟಿಸಬಲ್ಲ ಮನುಷ್ಯನ ಕಲ್ಪನಾ ಶಕ್ತಿಗೆ ಕ್ರೌರ್ಯದ ನೂರಾರು ರೂಪಗಳನ್ನು ಸಹ ಸೃಷ್ಟಿಸಬಲ್ಲ ಶಕ್ತಿಯಿದೆ. ಅಂಥ ಕ್ರೂರ ಮನಸ್ಸಿನ ಸೃಷ್ಟಿ `ಕಾನ್ಸಂಟ್ರೇಶನ್ ಕ್ಯಾಂಪ್’ಗಳು. ಅಲ್ಲಿ ಮನುಷ್ಯನ ಜೀವಕ್ಕೆ ಬೆಲೆಯೇ ಇಲ್ಲ. ಅಂಥ ಕ್ಯಾಂಪಿಗೆ ಸೆರೆಯಾಳಾಗಿ ಹೋದಲ್ಲಿ ಅವನು ಸಾವಿನ ಮನೆ ಹೊಕ್ಕಂತೆಯೇ. ಬದುಕಿ ವಾಪಸ್ಸು ಬರುವ ಪ್ರಶ್ನೆಯೇ ಇಲ್ಲ. ರಷಿಯಾದ ಲೇಖಕ ಅಲೆಕ್ಸಾಂಡರ್ ಸೊಲ್ಜೆನಿಟ್ಸಿನ್ ಹೇಳಿರುವಂತೆ ಅಂಥ ಕಡೆ ನಮ್ಮ ಸ್ವಂತ ಬದುಕೇ ನಮ್ಮದಾಗಿರುವುದಿಲ್ಲ. ಒಂದು ಅಂದಾಜಿನ ಪ್ರಕಾರ ಹಿಟ್ಲರನ ಕಾನ್ಸಂಟ್ರೇಶನ್ ಕ್ಯಾಂಪ್‍ಗಳಲ್ಲಿ 40 ಲಕ್ಷ ಮಂದಿ ಪ್ರಾಣಬಿಟ್ಟಿದ್ದಾರೆ.

            ಆಗ ಎರಡನೇ ಮಹಾಯುದ್ಧದ ಸಮಯ ಆನ್ ಪ್ರಾಂಕ್ ಹದಿಮೂರು ವರುಷದ ಪುಟ್ಟ ಹುಡುಗಿ. ನಮ್ಮ ನಿಮ್ಮ ಹಾಗೆಯೇ ಬದುಕನ್ನು ತೀವ್ರವಾಗಿ ಪ್ರೀತಿಸುತ್ತಿದ್ದವಳು. ಹುಣ್ಣಿಮೆಯ ಚಂದ್ರನಿಗೆ, ಹಾಡು ಹಕ್ಕಿಯ ಇಂಪಾದ ದನಿಗೆ, ಹಚ್ಚ ಹಸಿರ ಪ್ರಕೃತಿಗೆ ಮೈಮರೆಯುತ್ತಿದ್ದವಳು. ಹಿಟ್ಲರ್ ಬದುಕಿದ್ದ ಸಮಯದಲ್ಲಿ ಅವಳು ಯೆಹೂದಿಗಳ ಕುಟುಂಬದಲ್ಲಿ ಹುಟ್ಟಿದ್ದೇ ಅವಳ ತಪ್ಪು. ನಾತ್ಸಿಗಳು ಕಾನ್ಸಂಟ್ರೇಶನ್ ಕ್ಯಾಂಪ್‍ಗಳಲ್ಲಿ ನರಳಿ ನರಳಿ ಸಾಯಬೇಕಾಗಬಹುದೆಂಬ ಹೆದರಿಕೆಯಿಂದ ಆನ್ ಫ್ರಾಂಕ್ ತನ್ನ ಅಕ್ಕ, ತಾಯಿ, ತಂದೆಯ ಜೊತೆ ಎರಡು ವರ್ಷ ಜರ್ಮನಿಯ ಗೆಸ್ಟಾಪೊಗಳಿಗೆ (ನಾತ್ಸಿ ರಹಸ್ಯ ಪೋಲಿಸ ಪಡೆ) ಹೆದರಿ ಅವಿತುಕೊಂಡಿದ್ದಳು. ಸ್ವಚ್ಛಂದ ಬದುಕನ್ನು ಪ್ರೀತಿಸುತ್ತಿದ್ದ ಆನ್ ಫ್ರಾಂಕ್ ಪ್ರತಿದಿನವೂ ನಾಲ್ಕು ಗೋಡೆಗಳ ನಡುವಿನಿಂದ ಬಿಡುಗಡೆಗೆ ಹಂಬಲಿಸುತ್ತಿದ್ದಳು, ನಿರಂತರವೆನ್ನಿಸುತ್ತಿದ್ದ ಯುದ್ಧ ನಿಲ್ಲಲೆಂದು ಪ್ರಾರ್ಥಿಸುತ್ತಿದ್ದಳು. ಕೊಲೆಗಡುಕ ಹಿಟ್ಲರನ ನಾತ್ಸಿ ಕೈಗಳು ಕೊನೆಗೂ ಬಿಡಲಿಲ್ಲ, ಆ ಕಂದಮ್ಮನ ಕೊರಳನ್ನು ಹಿಚುಕಿಯೇ ಬಿಟ್ಟವು. ಒಂದು ಅಂದಾಜಿನ ಪ್ರಕಾರ ಹಿಟ್ಲರನ ಅವಧಿಯಲ್ಲಿ ಸುಮಾರು 15 ಲಕ್ಷ ಮಕ್ಕಳೇ ಪ್ರಾಣ ತೆತ್ತಿದ್ದಾರೆ.

            ಆನ್ ಫ್ರಾಂಕ್ ಮೂಲತಃ ಜರ್ಮನಿಯವಳು. ಅವಳ ತಂದೆ ಓಟೋ ಫ್ರಾಂಕ್ ತಮ್ಮ ಕುಟುಂಬದವರೊಂದಿಗೆ 1933ರಲ್ಲೇ ಹಾಲೆಂಡಿಗೆ ವಲಸೆ ಬಂದು ಅಲ್ಲೇ ಆಮ್‍ಸ್ಟರ್ ಡ್ಯಾಂನಲ್ಲಿ ತಮ್ಮ ವ್ಯಾಪಾರ ವಹಿವಾಟು ನಡೆಸುತ್ತಾ ನೆಲೆಸಿದ್ದರು. ಜರ್ಮನಿ ಹಾಲೆಂಡನ್ನು ಆಕ್ರಮಿಸಿತ್ತು. ಹಾಲೆಂಡಿನಲ್ಲೂ ಸಹ ಯೆಹೂದಿಗಳು ತಮ್ಮನ್ನು ಗುರುತಿಸಲೆಂದು ಹಳದಿ ನಕ್ಷತ್ರವೊಂದನ್ನು ಎದೆಯ ಮೇಲೆ ಧರಿಸಿಕೊಂಡಿರಬೇಕಿತ್ತು. ಅವರು ಟ್ರಾಂಗಳಲ್ಲಿ ಪ್ರಯಾಣಿಸುವ ಹಾಗಿರಲಿಲ್ಲ. ಅವರಿಗೆ ಸಿನಿಮಾ ಇನ್ನಿತರ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶವಿರಲಿಲ್ಲ. ಎಲ್ಲರ ಹಾಗೆ ಸೈಕಲ್ ಸಹ ತುಳಿಯುವ ಹಾಗಿರಲಿಲ್ಲ. ಯೆಹೂದಿಗಳು ಏನಾದರೂ ಕೊಳ್ಳಬೇಕಿದ್ದಲ್ಲಿ ಸಂಜೆ ಮೂರರಿಂದ ಐದು ಗಂಟೆಯವರೆಗೆ ಮಾತ್ರ ಅಂಗಡಿಗಳಿಗೆ ಹೋಗಬಹುದಿತ್ತು, ಅದೂ `ಯೆಹೂದಿಗಳ ಅಂಗಡಿ’ ಎಂಬ ಬೋರ್ಡು ಇರುವಲ್ಲಿಗೆ ಮಾತ್ರ. ಅವರ ಮಕ್ಕಳಿಗೆ ಪ್ರತ್ಯೇಕ ಶಾಲೆಗಳಿದ್ದವು. ರಾತ್ರಿ ಎಂಟರ ನಂತರ ಯೆಹೂದಿಗಳ್ಯಾರೂ ತಮ್ಮ ಮನೆಗಳಿಂದ ಹೊರಬರಬಾರದಿತ್ತು. ತಮ್ಮ ಮನೆಯ ಮುಂದಿನ ತೋಟಗಳಲ್ಲೂ ಸಹ ತಲೆಹಾಕಬಾರದಿತ್ತು.

            12ನೇ ಜೂನ್ 1942ರಂದು ಆನ್ ಫ್ರಾಂಕಳ ಹದಿಮೂರನೇ ಹುಟ್ಟುಹಬ್ಬ. ಬಂದ ಹಲವಾರು ಉಡುಗೊರೆಗಳಲ್ಲಿ ಅವಳಿಗೆ ಅತ್ಯಂತ ಖುಷಿ ಕೊಟ್ಟದ್ದು ಒಂದು ದಪ್ಪ ರಟ್ಟಿನ ನೋಟ್ ಪುಸ್ತಕ. ಅದನ್ನು ಅವಳು ತನ್ನ ದಿನಚರಿಯನ್ನಾಗಿ ಮಾಡಿಕೊಂಡಳು. ದಿನಚರಿಗಿಂತ ಹೆಚ್ಚಾಗಿ ಅದನ್ನು ತನ್ನ ಅನಿಸಿಕೆ, ಸುಖ-ದುಃಖ ಹಂಚಿಕೊಳ್ಳಬಲ್ಲ ಒಬ್ಬ ಜೀವಂತ ಆತ್ಮೀಯ ಜೊತೆಗಾರಳನ್ನಾಗಿ ಮಾಡಿಕೊಂಡಳು. ಅದನ್ನು ಪ್ರೀತಿಯಿಂದ `ಕಿಟ್ಟಿ’ ಎಂದು ಕರೆದಳು. ನೋವು ದುಃಖವಾದಾಗಲೆಲ್ಲಾ `ಕಿಟ್ಟಿ’ಯ ಮಡಲಲ್ಲಿ ಮುಖ ಹುಡುಗಿಸಿ ಅತ್ತಳು. ಖುಷಿ ಆದಾಗ `ಕಿಟ್ಟಿ’ಯ ಜೊತೆ ಹಂಚಿಕೊಂಡು ಹರಟೆ ಹೊಡೆಯುತ್ತಿದ್ದಳು. ಅದರ ಮೊದಲ ಪುಟದಲ್ಲೇ `ಇದುವರೆಗೆ ಯಾರೊಂದಿಗೂ ಹಂಚಿಕೊಳ್ಳಲು ಸಾಧ್ಯವಾಗದ ನನ್ನ ಭಾವನೆಗಳನ್ನು ನಿನ್ನೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗಬಹುದೆಂಬ ಭರವಸೆ ನನ್ನಲ್ಲಿದೆ. ಅಲ್ಲದೆ ನನಗೆ ಧೈರ್ಯ ಹಾಗೂ ಸಾಂತ್ವನ ಕೊಡುವ ಜೊತೆಗಾರ ಸಹ ಆಗುವೆಯೆಂಬ ನಂಬಿಕೆ ನನಗಿದೆ’ ಎಂದು ಬರೆದಿದ್ದಳು. ಮೊದಲೆಂದೂ ಬರೆಯದಿದ್ದರೂ `ಕಿಟ್ಟಿ’ಯಲ್ಲಿ ಬರೆಯತೊಡಗಿದಂತೆ ಹಾಡುಹಕ್ಕಿಗೆ ಹಾಡು ಸಹಜವಾಗಿ ಬಂದಂತೆ, ಅವಳ ಬರೆಹ ಅವಳ ಭಾವನೆಗಳ ಮಹಾಪೂರಕ್ಕೆ ಹಾದಿಮಾಡಿಕೊಟ್ಟಿತ್ತು. ತನ್ನ ಗೆಳೆಯ-ತಳತಿಯರ ಬಗ್ಗೆ, ಅಪ್ಪ-ಅಮ್ಮನ ಬಗ್ಗೆ, ತನ್ನ ಲೆಕ್ಕದ ಪಾಠದ ದ್ವೇಷದ ಬಗ್ಗೆ, ಯುದ್ಧವೆಂಬ ಕ್ರೌರ್ಯದ ಬಗ್ಗೆ, ತನ್ನ ಬದುಕಿನ, ಪ್ರಕೃತಿಯ ಪ್ರೇಮದ ಬಗ್ಗೆ, ಪೀಟರ್‍ನಲ್ಲಿನ ತನ್ನ ಪ್ರೀತಿಯ ಬಗ್ಗೆ ದಿನದಿನವೂ ತನ್ನ ಭಾವನೆಗಳನ್ನು ತನ್ನ ದಿನಚರಿಯಲ್ಲಿ ದಾಖಲಿಸತೊಡಗಿದಳು.

            ಆನ್ ಫ್ರಾಂಕ್ ಅತ್ಯಂತ ಸೂಕ್ಷ್ಮ ಹುಡುಗಿ. ತಾನೇ ತನ್ನ ದಿನಚರಿಯಲ್ಲಿ ಬರೆದಿರುವಂತೆ ಅವಳಿಗೆ ಎರಡು ಮುಖಗಳಿವೆ- ಒಂದು, ಎಲ್ಲರ ಮುಂದೆ ಅರಳು ಹುರಿದಂತೆ ಮಾತನಾಡುತ್ತ ತಲೆ ಚಿಟ್ಟಿಡಿಸುತ್ತಿದ್ದರೂ, ತನ್ನ `ಒಳಗಿನ’ ಭಾವನೆಗಳನ್ನು ಯಾರೊಂದಿಗೂ ಹೇಳಿಕೊಳ್ಳಲಾಗದೆ ತನ್ನ ಸಿಟ್ಟು, ಅಸಹನೆ ಎಲ್ಲಾ ಯಾರಿಲ್ಲದಾಗ ತಲೆದಿಂಬಲ್ಲಿ ಮುಖ ಹುದುಗಿಸಿ ಅತ್ತು ಕಣ್ಣೀರು ಸುರಿಸಿ, ಶಮನ ಮಾಡಿಕೊಳ್ಳುವ ಮತ್ತೊಂದು ಮುಖ. `ಅಪ್ಪ ಅಮ್ಮ ಏಕೆ ನನ್ನನ್ನು ಅರ್ಥಮಾಡಿಕೊಂಡಿಲ್ಲ? ನನ್ನನ್ನೇಕೆ ಪುಟ್ಟ ಮಗುವಿನ ಹಾಗೆ ನೋಡುತ್ತಾರೆ? ನನಗೂ ಸಹ ಭಾವನೆಗಳಿವೆ ಎಂದು ಅವರಿಗೇಕೆ ಅರ್ಥವಾಗುವುದಿಲ್ಲ?’ ಎನ್ನುವುದು ಎಂದಿಗೂ ಉತ್ತರ ಸಿಗದ ಅವಳ ಪ್ರಶ್ನೆಗಳು. `ಎಲ್ಲರೂ ನನ್ನನ್ನು ಅಪಾರ್ಥ ಮಾಡಿಕೊಳ್ಳುತ್ತಾರೆ, ಅದಕ್ಕೇ ನಾನು ನಿನ್ನ ಬಳಿ ಬರುತ್ತೇನೆ. ನಿನಗೆ ಸಾಕಷ್ಟು ತಾಳ್ಮೆ ಇದೆ’ ಎಂದು `ಕಿಟ್ಟಿ’ಗೆ ಹೇಳುತ್ತಾಳೆ.

            ನಾತ್ಸಿಗಳು ಹಾಲೆಂಡನ್ನು ಆಕ್ರಮಿಸಿಕೊಂಡಾಗಲೇ ಆನ್ ಫ್ರಾಂಕಳ ತಂದೆ ಓಟೋ ಫ್ರಾಂಕ್ ತಮ್ಮ ಕುಟುಂಬ ಅವಿತುಕೊಳ್ಳಲು ಸೂಕ್ತ ಸ್ಥಳ ಅರಸುತ್ತಿದ್ದ. ತನ್ನ ಕಚೇರಿಯ ಒಳಗೆ ಉಪಯೋಗಿಸದೇ ಇದ್ದ ಮೊದಲನೇ ಮತ್ತು ಎರಡನೇ ಮಹಡಿಯನ್ನು ಪ್ರಶಸ್ತ ಸ್ಥಳ ಎಂದು ಆಯ್ದು ಇಟ್ಟಿದ್ದ. ತನ್ನ ಕಚೇರಿಯ ಇನ್ನಿಬ್ಬರು ಡಚ್ ಗೆಳೆಯರ ಸಹಾಯ ಸಹ ಇತ್ತು. ಕೊನೆಗೊಂದು ದಿನ ಅವಳ ತಂದೆ ತಾವು ನಾತ್ಸಿಗಳಿಂದ ಅವಿತುಕೊಳ್ಳಲು ತಿಳಿಸಿದಾಗ ನಾತ್ಸಿ ಪೋಲೀಸರು ತನ್ನ ತಂದೆಗೆ ಹೇಳಿ ಕಳುಹಿಸಿದ್ದಾರೆಂದುಕೊಂಡಿದ್ದಳು. ನಂತರ, ನಾತ್ಸಿ ಪೋಲೀಸರು ಹೇಳಿಕಳುಹಿಸಿದ್ದುದು ತನ್ನ ತಂದೆಗಲ್ಲ, ತನ್ನ ಹದಿನಾರು ವಯಸ್ಸಿನ ಅಕ್ಕ ಮಾರ್ಗಟ್‍ಳಿಗೆ ಎಂದು ತಿಳಿದಾಗ ಮೈ ನಡುಗಿತು. ಹದಿಹರೆಯದ ಹುಡುಗಿಯರನ್ನು ನಾತ್ಸಿ ಪೋಲೀಸರು ಎಳೆದೊಯ್ಯುತ್ತಿದ್ದ ಕತೆಗಳನ್ನು ಅವಳು ಬಹಳಷ್ಟು ಕೇಳಿದ್ದಳು.

            ಅವಿತುಕೊಳ್ಳಲು ಹೊರಟಾಗ ತಾನು ಮೊದಲು ತೆಗೆದಿಟ್ಟುಕೊಂಡಿದ್ದು ತನ್ನ `ಕಿಟ್ಟಿ’ಯನ್ನು, ನಂತರ ಕೂದಲ ಕರ್ಲರ್‍ಗಳು, ಕರವಸ್ತ್ರ, ಶಾಲೆಯ ಪುಸ್ತಕಗಳು, ಬಾಚಣಿಗೆ ಹಾಗೂ ಹಳೆಯ ಪುಸ್ತಕಗಳನ್ನು ತೆಗೆದಿಟ್ಟುಕೊಂಡಳು. `ಬಟ್ಟೆಬರೆಗಳಿಗಿಂತ ನನಗೆ ನೆನಪುಗಳು ಬಹಳ ಮುಖ್ಯ’ ಎಂದಳು ತನ್ನ `ಕಿಟ್ಟಿ’ಯ ಜೊತೆ.

            ತಾವು ಅವಿತುಕೊಂಡಿದ್ದ ಕೋಣೆಗಳಿಗೆ ಹೊರ ಪ್ರಪಂಚಕ್ಕೆ ತಿಳಿಯದಂತೆ ಒಂದು ಅಲ್ಮೆರಾವನ್ನೇ ಗುಪ್ತ ಬಾಗಿಲು ಮಾಡಿಕೊಂಡಿದ್ದರು. ಸ್ವಚ್ಛ ಗಾಳಿ, ಬಿಸಿಲೂ ಬರದ ಹಾಗೆ ಕಿಟಕಿಗಳಿಗೆ ಪರದೆಗಳನ್ನು ಹಾಕಿ ಮುಚ್ಚಿದ್ದರು. ಹಗಲು ಹೊತ್ತು ಕೆಳಗೆ ಕಚೇರಿ ಇರುತ್ತಿದ್ದುದರಿಂದ ಯಾರೂ ಮಾತಾಡದೇ, ಶಬ್ದ ಮಾಡದೆ ಇರಬೇಕಿತ್ತು. ಕೆಮ್ಮಲೂ ಸಹ ಬಾರದು. ಕೆಮ್ಮಿನ ಶಬ್ದವೇ ಸಾವಿಗೆ ಆಹ್ವಾನವಾಗಬಹುದಿತ್ತು. ಚಟಪಟ ಎಂದು ಸದಾ ಮಾತನಾಡುತ್ತಿದ್ದ ಆನ್ ಫ್ರಾಂಕ್ (ಶಾಲೆಯಲ್ಲಿ ಸದಾ ಮಾತನಾಡುತ್ತಿದ್ದುದರಿಂದ ಮಾಸ್ತರು ಅವಳನ್ನು ಬುಡುಬುಡಿಕೆ (ಅhಚಿಣಣeಡಿbox) ಎಂದು ಕರೆದು ಶಿಕ್ಷೆಯಾಗಿ ಅದರ ಬಗ್ಗೆಯೇ ಅವಳಿಂದ ಒಂದು ಪ್ರಬಂಧ ಬರೆಸಿದ್ದರು. ಇಲ್ಲಿ ಸಾವಿಗೆ ಹೆದರಿ ಬರೇ ಪಿಸುಗುಟ್ಟಬೇಕಿತ್ತು, ಮೌನವಾಗಿರಬೇಕಿತ್ತು. ಅದರಿಂದಲೇ ಸಮಯ ಸಿಕ್ಕಾಗಲೆಲ್ಲ ತನ್ನ ದಿನಚರಿಯೊಂದಿಗೆ ತನ್ನ ಲೇಖನಿಯ ಮೂಲಕ ಮಾತನಾಡುತ್ತಿದ್ದಳು. `ಸಂಜೆಯ ಮತ್ತು ರಾತ್ರಿಯ ಹೊತ್ತಿನ ನಿರಂತರ ಎನ್ನಿಸುವ ಈ ಜಗತ್ತಿನ ಮೌನ ನನ್ನಲ್ಲಿ ಜೀವಭಯ ತರುತ್ತದೆ’ ಎಂದಿದ್ದಾಳೆ. ಆಗಸದಲ್ಲಿ ಸ್ವಚ್ಛಂದ ಹಾರುತ್ತಿದ್ದ ಪಕ್ಷಿಯ ರೆಕ್ಕೆಗಳನ್ನು ಕತ್ತರಿಸಿ ಪಂಜರದೊಳಗಿಟ್ಟ ಹಾಗಾಗಿತ್ತು. ಹಾಡುತ್ತಿದ್ದ ಹಕ್ಕಿಯ ಕೊರಳಿಗೆ ಉರುಳು ಬಿಗಿದ ಹಾಗಾಗಿತ್ತು.

            ಫ್ರಾಂಕ್ ಕುಟುಂಬದ ಜೊತೆಗೆ ಕೆಲದಿನಗಳ ನಂತರ ಮತ್ತೊಂದು ಯೆಹೂದೀ ಕುಟುಂಬ ಬಂದು ಸೇರಿಕೊಂಡಿತು. ವಾನ್‍ಡಾಲ್‍ಗಳ ಕುಟುಂಬದ ತಂದೆ ತಾಯಿ ಮತ್ತು ಮಗ ಪೀಟರ್ ಬಂದು ಸೇರಿಕೊಂಡರು. ಮತ್ತಷ್ಟು ದಿನಗಳನಂತರ ಡಸೆಲ್ ಎಂಬ ದಂತವೈದ್ಯ ಸಹ ಸೇರಿಕೊಂಡ ಹಾಗೂ ಆತ ಆನ್ ಫ್ರಾಂಕಳ ಕೋಣೆಯನ್ನೇ ಹಂಚಿಕೊಳ್ಳಬೇಕಾಯಿತು.

            ಅವರ ಗೆಳೆಯರಾದ ಎಲ್ಲಿ ಮತ್ತು ಮೀಪ್ ಎಂಬ ಡಚ್ ಹುಡುಗಿಯರು ಆ ಕುಟುಂಬಗಳಿಗೆ ಅಗತ್ಯ ಆಹಾರ ಇನ್ನಿತರ ಸರಂಜಾಮುಗಳನ್ನು ನಾತ್ಸಿ ಪೋಲೀಸರ ಕಣ್ಣು ತಪ್ಪಿಸಿ ತಲುಪಿಸುತ್ತಿದ್ದರು. ನಾತ್ಸಿಗಳ ಕೈಗೆ ಅವರೇನಾದರೂ ಸಿಕ್ಕಿಬಿದ್ದಿದ್ದರೆ ಅವರಿಗೂ ಸಹ ಸಾವೇ ಗತಿಯಾಗುತ್ತಿತ್ತು. ಆಂಥ ಒಳ್ಳೆಯ ಗೆಳೆಯರನ್ನು ಕಷ್ಟಕ್ಕೆ ಸಿಲುಕಿಸುವ ಬದಲು ತಾವೇ ನಾತ್ಸಿಗಳ ಕೈಗೆ ಸಿಕ್ಕು ಸತ್ತು ಹೋಗಿದ್ದಿದ್ದರೆ ಚೆನ್ನಾಗಿರುತ್ತಿತ್ತೆಂದು ಆನ್ ಫ್ರಾಂಕ್ ಎಷ್ಟೋ ಸಾರಿ ಅಂದುಕೊಂಡಿದ್ದಳು.

            ಆ ಕತ್ತಲ ಕೋಣೆಯಲ್ಲಿ ಅವಿತುಕೊಂಡಿದ್ದವರಿಗೆ ಆ ಗೆಳೆಯರೇ ಹೊರಪ್ರಪಂಚದ ಬೆಳಕಿನ ಕಿಂಡಿಯಾಗಿದ್ದರು. ಹೊರ ಪ್ರಪಂಚದ ಸಮಾಚಾರವನ್ನು ಅವರೇ ತಲುಪಿಸುತ್ತಿದ್ದರು. `ಪ್ರೀತಿಯ ಕಿಟ್ಟಿ, ಈ ದಿನ ಮೀಪ್ ತಂದಿರುವ ಸುದ್ದಿ ನಿನಗೆ ಸಂತೋಷ ಕೊಡುವಂಥದಲ್ಲ. ನಮ್ಮ ಹಲವಾರು ಜ್ಯೂ ಗೆಳೆಯರನ್ನು ನಾತ್ಸಿ ಪೊಲೀಸರು, ರೋಗಿಷ್ಠ ನಾಲಾಯಕ್ ದನಗಳ ಹಾಗೆ ಸ್ವಲ್ಪವೂ ಕರುಣೆಯಿಲ್ಲದೆ ಟ್ರಕ್‍ಗಳಲ್ಲಿ ತುಂಬಿ ಕ್ಯಾಂಪ್‍ಗಳಿಗೆ ಸಾಗಿಸುತ್ತಿದ್ದಾರಂತೆ. ಕ್ಯಾಂಪ್‍ಗಳ್ಲಲಿನ ಬದುಕು ಭಯಂಕರವಾದುದಂತೆ! ಒಂದು ಬಕೆಟ್ ನೀರು ನೂರಾರು ಜನರ ಸ್ನಾನ ಹಾಗೂ ಶೌಚ ಕಾರ್ಯಗಳಿಗೆ! ಗಂಡಸರು, ಹೆಂಗಸರು, ಮಕ್ಕಳೆಲ್ಲಾ ಒಂದೇ ಕಡೆ ಮಲಗಬೇಕಂತೆ. ಇದರಿಂದಾಗಿ ಬಹಳಷ್ಟು ಹೆಂಗಸರು, ಹುಡುಗಿಯರೂ ಸಹ ಬಸುರಾಗಿದ್ದಾರಂತೆ. ಆ ಕ್ಯಾಂಪ್‍ಗಳಿಂದ ತಪ್ಪಿಸಿಕೊಳ್ಳುವುದೇ ಸಾಧ್ಯವಿಲ್ಲ. ಸೆರೆಯಾಳುಗಳು ತಪ್ಪಿಸಿಕೊಳ್ಳದಂತೆ ಅವರ ತಲೆ ಬೋಳಿಸಿಬಿಡುತ್ತಾರೆ. ಹಾಲೆಂಡಿನಲ್ಲಿರುವ ಕ್ಯಾಂಪ್‍ಗಳ ಗತಿಯೇ ಹೀಗಾದರೆ, ಇಲ್ಲಿಂದ ಜರ್ಮನಿಗೆ ಸಾಗಿಸಲ್ಪಟ್ಟವರ ಗತಿಯೇನು! ಅಲ್ಲಿ ಗ್ಯಾಸ್ ಛೇಂಬರಿನಲ್ಲಿ ಹಾಕಿ ಕೊಲ್ಲುತ್ತಾರಂತೆ. ಬಹುಶಃ ಅದರಲ್ಲಿ ಸುಲಭವಾಗಿ ಸಾಯಬಹುದೇನೋ!! ಮೀಪ್ ಇದೆಲ್ಲಾ ನನಗೆ ಹೇಳಿದಾಗಿನಿಂದ ನನ್ನ ಮನಸ್ಸಿನಿಂದ ಆ ವಿಚಾರಗಳನ್ನು ಕಿತೊಗೆಯಲು ಸಾಧ್ಯವೇ ಆಗಿಲ್ಲ.’ ಶಾಲಾ ಪಾಠಗಳನ್ನು ಕಲಿಯಬೇಕಿದ್ದ ಬಾಲೆ ಹಿಟ್ಲರನ ಯುದ್ಧದ ಪಾಠಗಳನ್ನು ಮನದಟ್ಟು ಮಾಡಿಕೊಳ್ಳುತ್ತಿದ್ದಳು. ತಾವು ಅವಿತುಕೊಂಡಿದ್ದ ಕೋಣೆಯ ಅಲ್ಮೆರಾ ಬಾಗಿಲು ಸ್ವಲ್ಪ ಸದ್ದು ಮಾಡಿದರೂ ಸಾಕು ಬೆದರಿ ಬೆವರುತ್ತಿದ್ದರು. ಸಾವು ಎಲ್ಲೋ ಆ ಬಾಗಿಲ ಹಿಂದೆಯೇ ಹೊಂಚು ಹಾಕಿ ಕಾಯುತ್ತಿದೆ ಎಂಬಂತೆ ಜೀವ ಅಂಗೈಯಲ್ಲಿ ಹಿಡಿದು ಯುದ್ಧ ನಿಲ್ಲಲೆಂದು ಪ್ರಾರ್ಥಿಸುತ್ತಿದ್ದರು. ಹೇಗಾದರೂ ಆಗಲೆಂದು ಆನ್ ಫ್ರಾಂಕ್ ಅಲ್ಲೂ ಸಹ ಒಂದು ಸೂಟ್‍ಕೇಸ್‍ನಲ್ಲಿ ತನ್ನ ಅತ್ಯಗತ್ಯ ವಸ್ತುಗಳನ್ನು ತುಂಬಿ ನಾತ್ಸಿ ಪೋಲೀಸರೇನಾದರೂ ಬಂದಲ್ಲಿ ತಪ್ಪಿಸಿಕೊಳ್ಳಲು ತಯಾರಾಗಿದ್ದಳು. ಅವಳಮ್ಮ, `ಎಲ್ಲಿಗೆ ತಪ್ಪಿಸಿಕೊಂಡು ಹೋಗಬಲ್ಲೆ, ಈ ಸಾವಿನ ನಾಡಿನಲ್ಲಿ?’  ಎಂದಾಗ ಸುಮ್ಮನಾಗಿದ್ದಳು.

            ನಾತ್ಸಿಗಳ ಕೈಗೆ ಸಿಕ್ಕಿಬೀಳುವ ಮೂರು ತಿಂಗಳ ಮೊದಲಷ್ಟೇ ತನ್ನ ದಿನಚರಿಯಲ್ಲಿ ಬರೆದಿದ್ದಳು: `ಈ ಯುದ್ಧಗಳೆಲ್ಲಾ ಏಕೆ ಬೇಕು? ಆನ ಏಕೆ ಶಾಂತಿಯಿಂದ ಬದುಕಲಾರರು? ಈ ವಿನಾಶ ಏಕೆ? ಏಕೆ ದೊಡ್ಡ ದೊಡ್ಡ ಏರೋಪ್ಲೇನು, ಬಾಂಬುಗಳನ್ನು ಮಾಡುತ್ತಾರೆ? ಯುದ್ಧಗಳಿಗೆ ಲಕ್ಷಗಟ್ಟಲೆ ಸುರಿಯುತ್ತಾರೆ. ಆದರೆ ಆಸ್ಪತ್ರೆಗಳಿಗೆ, ಕಲಾವಿದರಿಗೆ, ಬಡವರಿಗೆ ಹಣವೇ ಇಲ್ಲ. ಪ್ರಪಂಚದ ಒಂದೆಡೆ ಕೊಳೆಯುವಷ್ಟು ಆಹಾರ ಇದ್ದರೂ, ಮತ್ತೊಂದೆಡೆ ಏಕೆ ಎಲ್ಲರೂ ಉಪವಾಸದಿಂದ ಸಾಯುತ್ತಾರೆ? ಆನರೇಕೆ ಅಷ್ಟೊಂದು ಹುಚ್ಚರು?’ ಜೀವಂತ ಜನಗಳ ಕ್ರೌರ್ಯಕ್ಕೆ ನಿರ್ಜೀವ `ಕಿಟ್ಟಿ’ ಏನು ಹೇಳೀತು?     ಯುದ್ಧದ ಅನಾಹುತಗಳ ಬಗ್ಗೆ ಸಾವಿರಾರು ಪುಸ್ತಕಗಳು ಬಂದಿವೆ. ಆದರೆ ಸಾವಿಗೆ ಹೆದರಿದ, ಬದುಕು ಪ್ರೀತಿಸುವ ಪುಟ್ಟ ಹುಡುಗಿಯೊಬ್ಬಳು ತನ್ನ ಮುಗ್ಧ ಕಂಗಳಿಂದ ಕಂಡ ಘೋರ ದೃಶ್ಯಗಳ ಪ್ರಾಮಾಣಿಕ ದಾಖಲೆ- ಆನ್ ಫ್ರಾಂಕಳ ದಿನಚರಿ.

            `ಸಂಜೆ ಕತ್ತಲಾದಾಗ ಕಿಟಕಿಯ ಬಿರುಕಲ್ಲಿ ನೋಡುತ್ತೇನೆ, ಸಾಲು ಸಾಲಾಗಿ ಜನಗಳನ್ನು ತಮ್ಮ ರೋದಿಸುವ ಮಕ್ಕಳೊಂದಿಗೆ ನಾತ್ಸಿ ಪೋಲೀಸರು ದನಕ್ಕೆ ಬಡಿದ ಹಾಗೆ ಬಡಿಯುತ್ತಾ ಕರೆದೊಯ್ಯುತ್ತಿರುತ್ತಾರೆ. ಕೆಲವರಂತೂ ಅಲ್ಲೇ ಕುಸಿಯುತ್ತಾರೆ. ಆದರೆ ಅವರು ಯಾರನ್ನೂ ಬಿಡುವುದಿಲ್ಲ. ಮುದುಕರು, ಮಕ್ಕಳು, ಗರ್ಭಿಣಿ ಹೆಂಗಸರು, ರೋಗಿಗಳು- ಎಲ್ಲರೂ ಹೊರಡಲೇಬೇಕು, ಸಾವಿನ ಮೆರವಣಿಗೆಯಲ್ಲಿ.’

            `ನನ್ನ ಬೆಚ್ಚಗಿನ ಹಾಸಿಗೆಯಲ್ಲಿ ಮಲಗಲು ಕೆಟ್ಟದೆನಿಸುತ್ತದೆ. ನಮ್ಮ ಗೆಳೆಯರು ಅತ್ಯಂತ ಕ್ರೂರ ಕೈಗಳ ಹಿಡಿತದಲ್ಲಿರುವಾಗ ನಾನು ಹೇಗೆ ಬೆಚ್ಚಗೆ ನಿದ್ದೆ ಮಾಡಲಿ?’ ಆನ್ ಫ್ರಾಂಕ್‍ಳಿಗೆ ಸರಿಯಾಗಿ ನಿದ್ದೆಯಿಲ್ಲದೆ ಕಣ್ಣ ಸುತ್ತಲೈ ಕಪ್ಪಗಿನ ಚಕ್ರಗಳು ಮೂಡತೊಡಗಿದ್ದವು.

            `ಅದೇಕೋ ನಾನು ಅನಾಥಳು ಎನ್ನಿಸುತ್ತಿದೆ. ನನ್ನ ಸುತ್ತಲೂ ಶೂನ್ಯ ಕವಿದಿರುವಂತೆ ಭಾಸವಾಗುತ್ತಿದೆ. ನನ್ನ ಆಟ-ಪಾಠಗಳು, ಗೆಳೆಯ-ಗೆಳತಿಯರು ನನ್ನ ಮನಸ್ಸನ್ನು ಸದಾ ತುಂಬಿರುತ್ತಿದ್ದರು. ಆದರೆ ಈಗ ಕೆಟ್ಟ ಘಟನೆಗಳ ಬಗೆಯಾಗಲೀ, ನ್ನ ಬಗ್ಗೆಯಾಗಲೀ ಯೋಚಿಸಲೇ ಸಾಧ್ಯವಾಗುತ್ತಿಲ್ಲ.’

            `ಯೋಚನೆ, ಖಿನ್ನತೆಯಿಂದ ಬಿಡುಗಡೆ ಹೊಂದಲು ವ್ಯಾಲೆರಿಯನ್ ಮಾತ್ರೆಗಳನ್ನು ನುಂಗಬಹುದು. ಆದರೆ ಮರುದಿನ ಮನಃಸ್ಥಿತಿ ಮೊದಲಿನ ಹಾಗೇ ಆಗಿರುತ್ತದೆ. ಒಮ್ಮೆ ಮನಸಾರೆ ನಕ್ಕರೆ ಅದು ಹತ್ತು ವ್ಯಾಲೆರಿಯನ್ ಮಾತ್ರೆಗಳಿಗಿಂತ ಚೆನ್ನಾಗಿ ಕೆಲಸಮಾಡುತ್ತದೆ. ಆದರೆ ನಾವು ಈಗೀಗ ನಗುವುದನ್ನೇ ಮರೆತಿದ್ದೇವೆ.’

            ಇನ್ನೂ ಬದುಕಿನ ಹೊಸ್ತಿಲಲ್ಲಿದ್ದ ಆನ್ ಫ್ರಾಂಕ್ ಬದುಕನ್ನು ತೀವ್ರವಾಗಿ ಪ್ರೀತಿಸುತ್ತಿದ್ದುದರಿಂದಲೇ ಅವಳಿಗೆ ಸಾವಿನ ಹೆದರಿಕೆ ಸದಾ ಕಾಡುತ್ತಿತ್ತು. ಯುದ್ಧದ ಬಗ್ಗೆ ಬರೆದಾಗಲೆಲ್ಲಾ ಸಾವಿನ ಬಗ್ಗೆ ಸೂಚ್ಯವಾಗಿ ತಿಳಿಸುತ್ತಿದ್ದಳು. `ಕಿಟ್ಟೀ, ಈ ಯುದ್ಧ ತಂದಿರುವ ನೋವು ದುಃಖದ ಬಗ್ಗೆ ನಿನಗೆ ಗಂಟೆಗಟ್ಟಲೆ ಹೇಳಬಲ್ಲೆ. ಆದರೆ ಅದರಿಂದ ನನ್ನ ದುಃಖ ಮತ್ತಷ್ಟು ಹೆಚ್ಚಾಗುತ್ತದೆ. ನಾವು ಈಗ ಏನು ಮಾಡಲೂ ಸಾಧ್ಯವಿಲ್ಲ. ಈ ನಮ್ಮ ಕಷ್ಟದ ದಿನಗಳು ಮುಗಿಯುವವರೆಗೂ ತಾಳ್ಮೆಯಿಂದ ಕಾಯುತ್ತಿರಬೇಕು. ಜ್ಯೂಗಳು, ಕ್ರಿಶ್ಚಿಯನ್ನರು ಎಲ್ಲರೂ ಕಾಯುತ್ತಿದ್ದಾರೆ. ಇಡೀ ಪ್ರಪಂಚವೇ ಕಾಯುತ್ತಿದೆ. ಆದರೆ ಇನ್ನೂ ಕೆಲವರು ಕಾಯುತ್ತಿದ್ದಾರೆ, ಬರುತ್ತಿರುವ ಸಾವಿಗಾಗಿ.’

            `ರಾತ್ರಿಯೆಲ್ಲಾ ಆಡುವ ಈ ಬಂದೂಕಿನ ಮತ್ತು ಏರೋಪ್ಲೇನುಗಳು ಸದ್ದಿನ ಹೆದರಿಕೆಯಿಂದ ತಪ್ಪಿಸಿಕೊಳ್ಳಲು ನನ್ನಿಂದ ಸಾಧ್ಯವಾಗುತ್ತಲೇ ಇಲ್ಲ. ದೂರದಲ್ಲಿ ಎಲ್ಲಾದರೂ ಏರೋಪ್ಲೇನಿನ ಸದ್ದು ಕೇಳಿಸಿದರೆ ನಮ್ಮ ಬದುಕಿನ ಕೊನೆ ಹತ್ತಿರ ಹತ್ತಿರವಾಗುತ್ತಿದೆ ಎನ್ನಿಸುತ್ತದೆ. ಪ್ರತೀ ಕ್ಷಣವೂ ಈಗ ನಮ್ಮ ಮೇಲೊಂದು ಬಾಂಬು ಬೀಳುತ್ತದೆ ಎನ್ನುವ ಹೆದರಿಕೆ ಇದ್ದೇ ಇರುತ್ತದೆ. ಧೈರ್ಯವಾಗಿರಲು ಹಲ್ಲು ಕಚ್ಚಿ ಹಿಡಿದು ಕೂರುತ್ತೇನೆ. ಮಲಗಿದರೂ ಎಂಥೆಂಥದೋ ಕೆಟ್ಟ ಕನಸುಗಳು- ನಾನೆಲ್ಲೋ ಕಂದಕದಲ್ಲಿ ಒಬ್ಬಳೇ ಬಿದ್ದಿರುವಂತೆ, ನಾವು ಅವಿತಿರುವ ಮನೆಗೆ ಬೆಂಕಿ ಬಿದ್ದಂತೆ ಅಥವಾ ನಾತ್ಸಿ ಪೊಲೀಸರು ಬಂದು ನಮ್ಮನ್ನು ಎಳೆದೊಯ್ದಂತೆ ಭಾಸವಾಗುತ್ತದೆ. ಕೆಲವೊಮ್ಮೆ ಅದು ಕನಸೋ ನಿಜವೋ ತಿಳಿಯದೆ ಬೆಚ್ಚಿ ಬೀಳುತ್ತೇನೆ. ಇದೆಲ್ಲಾ ಅನುಭವಿಸುತ್ತಿದ್ದರೆ ನನ್ನ ಸಾವು ತೀರಾ ಹತ್ತಿರದಲ್ಲಿರುವಂತೆ ಭಾಸವಾಗುತ್ತದೆ.’

            `ಈ ಪ್ರಪಂಚ ಮೊದಲಿನ ಹಾಗೆ ಸರಿ ಹೋಗುತ್ತದೆಂದು ಊಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಎಷ್ಟೋ ಸಾರಿ ನಾನು `ಯುದ್ಧ ಮುಗಿನನಂತರ..’ಎಂದು ಮಾತನಾಡುತ್ತೇನೆ. ಆದರೆ ಅದೆಲ್ಲಾ ಗಾಳಿಯಲ್ಲಿ ಕಟ್ಟುವ ಅರಮನೆ ಅಷ್ಟೆ. ಯುದ್ಧದ ಕೊನೆಯೇ ಕಾಣುತ್ತಿಲ್ಲ. ಅದು ದೂರ, ಬಹಳ ದೂರವಿದೆ – ದಂತಕತೆಯ ಹಾಗೆ. ನನ್ನ ಹಳೆಯ ಮನೆ, ಗೆಳೆಯರು, ಶಾಲೆಯಲ್ಲಿನ ಆಟ-ಪಾಠಗಳ ಬಗ್ಗೆ ಯೋಚಿಸಿದಾಗೆಲ್ಲಾ ನನಗನ್ನಿಸುತ್ತದೆ ಅಲ್ಲಿ ಇದ್ದುದು ನಾನಲ್ಲ, ಅದು ಬೇರೊಬ್ಬ ವ್ಯಕ್ತಿಯೇ ಎಂದು.’

            ಸೆರೆಮನೆ ವಾಸ ಏನೆಂದರೆಂದು ಅರಿಯದ ಆನ್ ಫ್ರಾಂಕ್‍ಳಿಗೆ ಆ ಎರಡು ವರ್ಷಗಳ ಅನಿಶ್ಚಿತ ಖೈದು ನಿರಂತರ ಎನ್ನಿಸಿತ್ತು. ನಿರಾಳ, ಸ್ವತಂತ್ರ ಬದುಕಿಗೆ ಹಂಬಲಿಸುತ್ತಿದ್ದ ಆನ್ ಫ್ರಾಂಕ್‍ಳ ದಿನಚರಿಯಲ್ಲಿ ಮಹಾತ್ಮ ಗಾಂಧಿಯ ಉಲ್ಲೇಖವೂ ಇದೆ. 27ನೇ ಫೆಬ್ರವರಿ 1943ರಂದು, `ಇಂಡಿಯಾದ ಸ್ವಾತಂತ್ರ್ಯ ಪ್ರಿಯ ಗಾಂಧಿ ತನ್ನ ಲೆಕ್ಕವಿಲ್ಲದಷ್ಟನೇ ಬಾರಿಯ ಉಪವಾಸ ಸತ್ಯಾಗ್ರಹ ಹೂಡುತ್ತಿದ್ದಾರೆ’ ಎಂದು ಬರೆದಿದ್ದಾಳೆ.

            ಆನ್ ಫ್ರಾಂಕ್‍ಳಿಗೆ ನಾಲ್ಕು ಗೋಡೆಗಳ ನಡುವಿನ ಸೆರೆವಾಸ ಅಸಹನೀಯವಾಗಿತ್ತು. ಸ್ವಾತಂತ್ರ್ಯದ ಶುಭ್ರಗಾಳಿಗಾಗಿ ತಹತಹಿಸುತ್ತಿದ್ದಳು. `ಪ್ರತಿ ದಿನ ಬೆಳಿಗ್ಗೆ ನಿದ್ದೆಯಿಂದ ಎದ್ದಾಗ ಮಂಕಾಗಿರುವ ಮನಸ್ಸನ್ನು ಎಚ್ಚರಗೊಳಿಸಲು ತಕ್ಷಣ ಕಿಟಕಿಯ ಬಳಿ ಹೋಗಿ ಒಂಚೂರು ತೆರೆದು ಅಲ್ಲಿ ಮೂಗು ಸೇರಿಸಿ ಶುಭ್ರ ಗಾಳಿಯನ್ನು ಉಸಿರಾಡಲು ಯತ್ನಿಸುತ್ತೇನೆ. ಸ್ವಚ್ಛ ಗಾಳಿ ಒಳಹೋದಂತೆ ನಾನು ನಿದ್ದೆಯಿಂದ ಸಂಪೂರ್ಣ ಎಚ್ಚರಾಗುತ್ತೇನೆ.’

            `ಯಾರಾದರೂ ಗೆಳೆಯರು ಹೊರಗಿನಿಂದ ನಮ್ಮ ಕತ್ತಲ ಕೋಣೆಗೆ ಬಂದಾಗ ಅವರ ಬಟ್ಟೆಗಳಲ್ಲಿ ಹರಿದಾಡಿದ ಶುಭ್ರ ಗಾಳಿಯನ್ನು ನೆನೆಸಿಕೊಂಡು, ಅವರ ಮುಖದಲ್ಲಿನ ತಾಜಾ ಥಂಡಿಯನ್ನು ನೋಡಿದಾಗಲೆಲ್ಲಾ ನನಗೆ ದುಃಖ ತಡೆಯಲಾಗದೆ, `ನನಗೇಕೆ ಶುಭ್ರ ಗಾಳಿ ಉಸಿರಾಡುವ ಅವಕಾಶವಿಲ್ಲ?’ ಎಂದು ಹೊದಿಕೆಗಳಲ್ಲಿ ಮುಖ ಹುದುಗಿಸಿ ಅತ್ತಿದ್ದೇನೆ.’

            `ಕೆಲವೊಮ್ಮೆ ಈ ವಾತಾವರಣ ಅತ್ಯಂತ ಅಸಹನೀಯವಾಗುತ್ತದೆ, ಮುಖ್ಯವಾಗಿ ಭಾನವಾರಗಳಂದು. ಒಂದು ಪಕ್ಷಿ ಸಹ ಹಾಡುವುದು ಕೇಳುವುದಿಲ್ಲ. ಎಲ್ಲೆಲ್ಲೂ ಸಾವಿನಂತಹ ಮೌನ ನೇತಾಡುತ್ತಿರುತ್ತದೆ. ಎಲ್ಲಿ ಅದು ನನ್ನನ್ನು ಹಿಡಿದು ಪಾತಾಳಕ್ಕೆ ಎಳೆದುಕೊಂದುಹೋಗಿಬಿಡುತ್ತದೋ ಎನ್ನುವ ಹೆದರಿಕೆಯಾಗುತ್ತದೆ. ಅಂಥ ಸಮಯಗಳಲ್ಲಿ ಈ ಮನೆಯಲ್ಲೇ ಅಲ್ಲಿ, ಇಲ್ಲಿ ಅಲೆದಾಡುತ್ತೇನೆ. ರೆಕ್ಕೆ ಕತ್ತರಿಸಿದ ಹಾಡುಹಕ್ಕಿ ಕತ್ತಲಲ್ಲಿ ತನ್ನ ಪಂಜರದ ಸರಳುಗಳಿಗೆ ಡಿಕ್ಕಿ ಹೊಡೆಯುವ ಹಾಗೆ. `ಹೊರಗೆ ಹೋಗು, ನಲಿದಾಡು, ಶುಭ್ರ ಗಾಳಿಯನ್ನು ಮನಸಾರೆ ಉಸಿರಾಡು ಎಂದು ನನ್ನೊಳಗಿನ ಧ್ವನಿ ಕಿರುಚುತ್ತದೆ. ಆದರೆ ಸಾಧ್ಯವಿಲ್ಲ. ಹೋಗಿ ಮಲಗಿ ನಿದ್ರಿಸಲು ಯತ್ನಿಸುತ್ತೇನೆ. ಈ ಮೌನ ಮತ್ತು ಹೆದರಿಕೆಯನ್ನು ಕೊಲ್ಲಲು ನಿದ್ದೆಗಿಂತ ಬೇರೆ ದಾರಿಯೇ ಇಲ್ಲ.’

            ಆನ್ ಫ್ರಾಂಕ್ ಹುಟ್ಟು ಬರಹಗಾರ್ತಿ. ಅಲ್ಲದೆ ಅಲ್ಲಿ ಗೆಳೆಯರು ತಂದುಕೊಡುತ್ತಿದ್ದ ಪುಸ್ತಕಗಳನ್ನೆಲ್ಲಾ ಓದುತ್ತಿದ್ದಳು. `ನಾವು ಪ್ರತೀ ಶನಿವಾರ ಪುಸ್ತಕಗಳಿಗಾಗಿ ಎದುರು ನೋಡುತ್ತಿರುತ್ತೇವೆ, ಸಣ್ಣ ಮಕ್ಕಳು ಉಡುಗೊರೆಗಳಿಗೆ ಕಾಯುವ ಹಾಗೆ. ಹೀಗೆ ಅವಿತುಕೊಂಡಿರುವ ನಮ್ಮಂಥವರಿಗೆ ಪುಸ್ತಕಗಳ ಅವಶ್ಯಕತೆ ಎಷ್ಟಿದೆಯೆಂಬುದು ಸಾಮಾನ್ಯ ಜನರಿಗೇನು ಗೊತ್ತು?’ ಯಾವುದಾದರೂ ಪುಸ್ತಕ ಚೆನ್ನಾಗಿದೆ ಎನ್ನಿಸಿದಲ್ಲಿ, ತಕ್ಷಣವೇ ನಿರ್ಧರಿಸುತ್ತಿದ್ದಳು, `ನನ್ನ ಮಕ್ಕಳಿಗೆ ಈ ಪುಸ್ತಕ ಓದಲು ಕೊಡುತ್ತೇನೆ’ ಎಂದು. ಅವಳ ಪ್ರಿಯವಾದ ವಿಷಯ ಗ್ರೀಕ್ ಮತ್ತು ರೋಮ್ ಪುರಾಣದ ಕತೆಗಳು.

            ಆನ್ ಫ್ರಾಂಕ್‍ಳ ಮಹದಾಸೆ ಲೇಖಕಿ ಮತ್ತು ಪತ್ರಕರ್ತೆಯಾಗಬೇಕೆಂಬುದು. `ನಾನು ಸಮಯ ಹಾಳು ಮಾಡಬಾರದು, ನಾನು ಬರೆಯಬೇಕು, ಪತ್ರಕರ್ತೆಯಾಗಬೇಕು. ಅದು ನನ್ನ ಮಹದಾಸೆ (ಅಥವಾ ಹುಚ್ಚುತನ?). ನಾನು ಬರೆಯಬಲ್ಲೆ. ಈಗಾಗಲೇ ನಾನು ಬರೆದಿರುವ ಕೆಲವು ಕತೆಗಳು ಚೆನ್ನಾಗಿವೆ. ನಾನು ಬರೆಯಬಲ್ಲವಳೆಂದು ನನ್ನ ದಿನಚರಿಯೇ ಹೇಳುತ್ತದೆ. ಆದರೆ ನನಗೆ ಬರೆಯುವ ಕಲೆ ಇದೆಯೋ ಇಲ್ಲವೋ ಗೊತ್ತಿಲ್ಲ. ನಾನು ಪುಸ್ತಕಗಳನ್ನು ಮತ್ತು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯಲು ಸಾಧ್ಯವಾಗದಿದ್ದಲ್ಲಿ, ಕನಿಷ್ಠ ನನಗಾಗಿಯಾದರೂ ಬರೆದುಕೊಳ್ಳುತ್ತೇನೆ.’

            `ನಾನು ಬರೆಯತೊಡಗಿದಂತೆ ನನ್ನ ಮನಸ್ಸು ಅಲ್ಲೋಲ ಕಲ್ಲೋಲವಾಗುತ್ತದೆ, ನನ್ನ ದುಃಖ ಮಾಯವಾಗುತ್ತದೆ. ನನ್ನಲ್ಲಿನ ಧೈರ್ಯ ಪುನಃಶ್ಚೈತನ್ಯಗೊಳ್ಳುತ್ತದೆ.’

            `ನನಗೆ ನನ್ನ ಅಮ್ಮನ ಹಾಗೆ ಮತ್ತು ಶ್ರೀಮತಿ ವಾನ್ ಡಾನ್‍ಳ ಹಾಗೆ ಬದುಕುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ನನಗೆ ಗಂಡ ಮತ್ತು ಮಕ್ಕಲ ಜೊತೆಗೆ ಬೇರೇನಾದರೂ ಇರಬೇಕು. ಅದರಲ್ಲಿ ನನ್ನೇ ನಾನು ತೊಡಗಿಸಿಕೊಳ್ಳಬೇಕು.’

            `ನನ್ನ ಸಾವಿನ ನಂತರವೂ ನಾನು ಬದುಕಬೇಕು’ ಎಂದು ಆನ್ ಫ್ರಾಂಕ್ ಬರೆದಾಗ ಆಕೆ ತನ್ನ ದಿನಚರಿಯ ಬಗ್ಗೆ ಬರೆಯಲಿಲ್ಲ. ಅದಕ್ಕಿಂತ ಮಹತ್ತರವಾದುದನ್ನು ಬರೆಯಬೇಕು, ಕಾಲನ ಮಡಿಲಲ್ಲಿ ಶಾಶ್ವತವಾಗಿರುವ ಹಾಗೆ ಮಾಡಬೇಕೆಂದಿದ್ದಳು. ಆದರೆ ಕೊಲೆಗಡುಕ ಹಿಟ್ಲರ್ ಆನ್ ಫ್ರಾಂಕ್‍ಳಂಥ ಮುಗ್ಧ ಹಸುಳೆಯನ್ನೂ ಬಿಡಲಿಲ್ಲ.

`1942ರಿಂದ 1944ರವರೆಗಿನ ಅಜ್ಞಾತವಾಸದಲ್ಲಿ, ತನ್ನ ಅಪ್ಪ-ಅಮ್ಮ ಮತ್ತು ಅಕ್ಕ ಇದ್ದರೂ ಸೂಕ್ಷ್ಮಮತಿಯಾದ ಆನ್ ಫ್ರಾಂಕ್‍ಳಿಗೆ ಒಂಟಿತನ ಕಾಡುತ್ತಿತ್ತು. ಆಕೆಯಲ್ಲಿ ದೈಹಿಕ ಬದಲಾವಣೆಗಳಾಗಿ ಪ್ರೌಢಾವಸ್ಥೆಗೆ ಕಾಲಿಡುತ್ತಿರುವಂತೆ, ತನಗೊಬ್ಬ ಗೆಳೆಯ ಬೇಕೆಂದೆನ್ನಿಸಿ, ಅವರ ಜೊತೆಯಲ್ಲೇ ಇರುವ ವಾನ್ ಡಾಲ್‍ರ ಮಗ ಹದಿನಾರರ ವಯಸ್ಸಿನ ಪೀಟರ್‍ನಲ್ಲಿ ಅಂಥ ಗೆಳೆಯನನ್ನು ಹುಡುಕುವ ಪ್ರಯತ್ನ ಮಾಡುತ್ತಾಳೆ. `ಯಾರೊಟ್ಟಿಗಾದರೂ ಮಾತನಾಡಬೇಕೆನ್ನುವ ತೀವ್ರ ಆಸೆ ನನಗರಿವಿಲ್ಲದೆ ಪೀಟರ್‍ನನ್ನು ಆಯ್ದುಕೊಳ್ಳುವಂತೆ ಮಾಡಿತು. ಅವನ ಆಳ ನೀಲಿ ಕಣ್ಣುಗಳಲ್ಲಿ ನೋಡುತ್ತಿದ್ದರೆ ಅವನ ಮನಸ್ಸನ್ನೇ ಓದಿಬಿಡಬಹುದು.’

            `ನನ್ನ ವಯಸ್ಸು ಹೆಚ್ಚುತ್ತಿರುವಂತೆ ನನ್ನಲ್ಲಿನ ಪ್ರೀತಿ ಸಹ ಪ್ರೌಢವಾಗುತ್ತಿದೆ. ಈ ಪುಟ್ಟ ಹುಡುಗಿಯ ಮನಸ್ಸಿನಲ್ಲಿ ಇಷ್ಟೊಂದು ಅಲ್ಲೋಲ ಕಲ್ಲೋಲವಾಗುತ್ತಿದೆಯೆಂದು ಯಾರಿಗೆ ತಾನೆ ಗೊತ್ತಾಗಬಲ್ಲದು?’ ಆ ಸೆರೆವಾಸದಲ್ಲೂ, ಸಾವಿನ ಹೆದರಿಕೆಯ ವಾತಾವರಣದಲ್ಲೂ ಪ್ರೀತಿ, ಪ್ರೇಮ ಅವಳ ಆಲೋಚನೆಗಳ ದಿಕ್ಕನ್ನೇ ಬದಲಿಸಿಬಿಡುತ್ತದೆ. `ಈಗೀಗ ಬದುಕು ಹೆಚ್ಚು ಸುಂದರ ಎನ್ನಿಸುತ್ತಿದೆ, ಅದಕ್ಕೆ ಪೀಟರೇ ಕಾರಣ’ ಎನ್ನುತ್ತಾಳೆ. `ಬೆಳಗಿನಿಂದ ಸಂಜೆಯವರೆಗೂ ಪೀಟರ್‍ನನ್ನು ಭೇಟಿಯಾಗಲು ಕಾತರಿಸುತ್ತಿರುತ್ತೇನೆ. ಕಿಟ್ಟಿ, ನಾನು ನಿನ್ನೊಂದಿಗೆ ಸದಾ ಪ್ರಾಮಾಣಿಕವಾಗಿದ್ದೇನೆ, ನಿಜ ಹೇಳುತ್ತೇನೆ ಕೇಳು, ನಾನು ಜೀವಂತವಿರುವುದೇ ಆ ಭೇಟಿಗಳಿಂದ’

            ಪೀಟರ್‍ನಿಂದಾಗಿ ಅವಳು ಬದುಕನ್ನು ನೋಡುವ ದೃಷ್ಟಿಯೇ ಬದಲಾಯಿತು. `ನನಗನ್ನಿಸುತ್ತಿದೆ, ಈ ಬದುಕಿನಲ್ಲಿ ಇನ್ನೂ ಸೌಂದರ್ಯ ಉಳಿದಿದೆ ಎಂದು. ಈ ಪ್ರಕೃತಿಯಲ್ಲಿ ಸೂರ್ಯನ ಹೊಂಗಿರಣಗಳಲ್ಲಿ, ಸ್ವಾತಂತ್ರ್ಯದಲ್ಲಿ, ನಿನ್ನಲ್ಲಿಯೂ ಸಹ. ಇವುಗಳನ್ನು ನೋಡು, ಕಳೆದುಕೊಂಡ ನಿನ್ನನ್ನೇ ನೀನು ಹುಡುಕಿಕೊಳ್ಳಬಲ್ಲೆ. ಧೈರ್ಯ ಮತ್ತು ನಂಬಿಕೆ ಇರುವವರು ಎಂದಿಗೂ ದುಃಖದಲ್ಲಿ ಕೊಳೆಯಲಾರರು.’

            `ನಾನು ನನ್ನ ದುಃಖಗಳನ್ನು ಯಾರೊಂದಿಗೂ ಹೇಳಿಕೊಂಡಿಲ್ಲ. ನನ್ನ ಅಮ್ಮನ ಭುಜಕ್ಕೊರಗಿ ಕಣ್ಣೀರು ಹಾಕಿಲ್ಲ. ಆದರೆ ಈಗ `ಅವನ’ ಭುಜಕ್ಕೊರಗಿ ಸದಾ ಹಾಗೇ ಇರಬೇಕೆನ್ನಿಸುತ್ತದೆ. ಈಗ ನನ್ನ ಬದುಕು ಎಷ್ಟು ಸುಧಾರಣೆಗೊಂಡಿದೆ! ದೇವರು ನನ್ನನ್ನು ಈ ಪ್ರಪಂಚದಲ್ಲಿ ಒಂಟಿಯಾಗಿ ಬಿಟ್ಟಿಲ್ಲ, ಬಿಡುವುದೂ ಇಲ್ಲ. ಪೀಟರ್ ನನ್ನ ಭಾವನೆಗಳನ್ನು ಸ್ಪರ್ಶಿಸಿದ ಹಾಗೆ ಇನ್ನಾರೂ ಸ್ಪರ್ಶಿಸಿಲ್ಲ.’

            `ನಾನು ಕೆಲವೊಮ್ಮೆ ಭಾವುಕಳಾಗಿಬಿಡುತ್ತೇನೆ. ಇಲ್ಲಿ ಈ ಅಟ್ಟದ ಮೇಲೆ, ಕಸ ಧೂಳಿನ ಮಧ್ಯೆಯೂ ಸಹ ಪೀಟರ್ ಭುಜಕ್ಕೊರಗಿ, ಅವನು ನನ್ನ ಮುಂಗುರುಳಲ್ಲಿ ಕೈಯಾಡಿಸುವಾಗ, ತೆರೆದ ಕಿಟಕಿಯಲ್ಲಿ ಹಸಿರು ಮರಗಳನ್ನು ನೋಡುವಾಗ, ಪಕ್ಷಿಗಳು ಹಾಡುವುದನ್ನು ಕೇಳುತ್ತಾ ಮೈ ಮರೆತಿರುವಾಗ ಸೂರ್ಯ ಹೊರಗಿನ ಸ್ವಚ್ಛಂದ ಪ್ರಪಂಚಕ್ಕೆ ಬಾ ಎಂದು ಆಹ್ವಾನಿಸುತ್ತಾನೆ. ಹೋ! ನಾವು ಹೊರ ಹೋಗುವ ಹಾಗಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!’

            ಆನ್ ಫ್ರಾಂಕ ಅಜ್ಞಾತವಾಸದ ಕೊನೆಯ ದಿನಗಳವು. ಆ ಕೊನೆಯ ದಿನಗಳ ಬದುಕಲ್ಲಿ ಪೀಟರ್ ಬೆಳ್ಳಿಯ ಬೆಳಕಾಗಿ ಬಂದ.

            1944ರ ಆಗಸ್ಟ್ 4ರಂದು ಕೊನೆಗೂ ಸಾವು ನಾತ್ಸಿ ಪೊಲೀಸರ ರೂಪದಲ್ಲಿ ದಾಳಿ ಮಾಡಿತು. ಆನ್ ಫ್ರಾಂಕ್ ಮತ್ತು ಅವಳ ಅಕ್ಕ ಮಾರ್ಗಟ್‍ಗಳನ್ನು ಜರ್ಮನಿಯ ಬರ್ಗೆನ್-ಬೆಲ್ಸೆನ್ ಕಾನ್ಸಂಟ್ರೇಶನ್ ಕ್ಯಾಂಪಿಗೆ ಸಾಗಿಸಿದರು. ಅವರನ್ನು ರಕ್ಷಿಸಿದ್ದ ಡಚ್ ಗೆಳೆಯರನ್ನು ಅರೆಸ್ಟು ಮಾಡಿದರು. ವಾನ್ ಡಾಲ್‍ರನ್ನು ಗ್ಯಾಸ್ ಛೇಂಬರಿಗೆ ಹಆಕಿ ಕೊಂದರು. ಆನ್ ಫ್ರಾಂಕಳ ಅಪ್ಪನನ್ನು ಸಹ ಗ್ಯಾಸ್ ಛೇಂಬರಿಗೆ ಹಾಕಬೇಕೆಂದಿದ್ದರು. ಆದರೆ ಆತ ಅದೃಷ್ಟವಶಾತ್ ಪಾರಾದ. ಆತ ಕ್ಯಾಂಪಿನ ಆಸ್ಪತ್ರೆಯಲ್ಲಿರುವಾಗ 27ನೇ ಜನವರಿ 1945ರಂದು ರಷಿಯನ್ನರು ಆಕ್ರಮಣ ನಡೆಸಿ ಅವರನ್ನೆಲ್ಲ ಬಿಡುಗಡೆ ಮಾಡಿದರು. ಆತ ವಾಪಸ್ಸು ಬರುವಾಗ ಆತನ ಹೆಂಡತಿ 5ನೇ ಜನರಿಯಂದೇ ಸತ್ತುಹೋದ ವಿಷಯ ತಿಳೀಯಿತು. ರಷಿಯನ್ನರು ಆಕ್ರಮಣ ಮಾಡಬಹುದೆಂದು ಸುಮಾರು ಹನ್ನೊಂದು ಸಾವಿರ ಜನ ಸೆರೆಯಾಳುಗಳನ್ನು ಜರ್ಮನ್ನರು ಜರ್ಮನಿಗೆ ಎಳೆದುಕೊಂಡು ಹೋದರು. ಆ ಗುಂಪಿನಲ್ಲಿದ್ದ ಪೀಟರನ ಸುದ್ದಿ ಮತ್ತೆ ಯಾರೂ ಕೇಳಲೇ ಇಲ್ಲ.

            ಇತ್ತ ಬರ್ಗೆನ್-ಬೆಲ್ಸೆನ್ ಕಾನ್ಸಂಟ್ರೇಶನ್ ಕ್ಯಾಂಪಿನಲ್ಲಿದ್ದ ಆನ್ ಫ್ರಾಂಕ್ ಮತ್ತು ಮಾರ್ಗಟ್ ಇಬ್ಬರಿಗೂ ಟೈಫಾಯ್ಡ್ ಬಂತು. ಒಂದು ದಿನ ಮೇಲಿನ ಬಂಕರ್‍ನಲ್ಲಿ ಮಲಗಿದ್ದ ಮಾರ್ಗಟ್ ಏಳಲು ಹೋಗಿ ಆಯತಪ್ಪಿ ಕೆಳಗೆ ಬಿದ್ದುಬಿಟ್ಟಳು. ಮೊದಲೇ ಶಿಥಿಲಗೊಂಡಿದ್ದ ಅವಳ ದೇಹ ಆ ಹೊಡೆತ ತಡೆಯಲಿಲ್ಲ. `ಎಂತೆಂಥ ನೋವು, ಹಿಂಸೆ, ಹೆದರಿಕೆ ಸಹ ಕೊಲ್ಲದ ಆನ್‍ಳ ಧೈರ್ಯ, ಆತ್ಮವಿಶ್ವಾಸವನ್ನು ಮಾರ್ಗಟ್‍ಳ ಸಾವು ಕೊಂದುಬಿಟ್ಟಿತು. ಕೆಲವೇ ದಿನಗಳ ನಂತರ, ಹಾಲೆಂಡಿನ ಬಿಡುಗಡೆಗೆ ಎರಡು ತಿಂಗಳ ಮೊದಲು, ತನ್ನ ಹದಿನಾರನೇ ಹುಟ್ಟುಹಬ್ಬಕ್ಕೆ ಇನ್ನೂ ಮೂರು ತಿಂಗಳಿರುವಾಗ, ಮಾರ್ಚ್ 1945ರ ಮೊದಲ ವಾರದಲ್ಲಿ ಆನ್ ಫ್ರಾಂಕ್ ಸತ್ತುಹೋದಳು. ನಾತ್ಸಿಗಳ ಕೈಗೆ ಸಿಕ್ಕಿಬೀಳುವ ಇಪ್ಪತ್ತು ದಿನಗಳ ಮೊದಲಷ್ಟೇ `ಜನರ ಹೃದಯದಲ್ಲಿ ಇನ್ನೂ ಒಳ್ಳೆಯತನವಿದೆ ಎಂಬ ನಂಬಿಕೆ ನನಗಿದೆ. ನನ್ನ ಭರವಸೆಗಳನ್ನು ಸಾವಿನ ಹೆದರಿಕೆ, ನೋವಿನ ಆಧಾರದ ಮೇಲೆ ಕಟ್ಟಲು ಸಾಧ್ಯವಿಲ್ಲ. ಇಡೀ ಪ್ರಪಂಚ ಕ್ರಮೇಣ ನಾಶವಾಗುತ್ತದೆ. ಸಾವಿನ ಆರ್ಭಟ ಹತ್ತಿರ ಹತ್ತಿರವಾಗುತ್ತಿರುವುದು ನನಗೂ ಕೇಳಿಸುತ್ತಿದೆ. ಸಾವಿರಾರು ಜನರ ನೋವು ನನಗೂ ತಿಳಿಯುತ್ತಿದೆ. ಆದರೂ ನಾನು ಮೇಲೆ, ಸ್ವರ್ಗದ ಕಡೆ ನೋಡುವಾಗಲೆಲ್ಲಾ, ಈ ಕ್ರೌರ್ಯ ಕೊನೆಗಾಣುತ್ತದೆ, ಜಗತ್ತಿನಲ್ಲಿ ಮತ್ತೆ ಸುಖ-ಶಾಂತಿ ನೆಲೆಸುತ್ತದೆಂಬ ನಂಬಿಕೆ ಬರುತ್ತದೆ’ ಎಂದು ಬರೆದಿದ್ದಳೂ.

            ತಾನು ಯೆಹೂದಿಯಾಗಿ ಆಗಿ ಹುಟ್ಟಿದ್ದಕ್ಕೆ ಯಾವ ಕ್ರೌರ್ಯ, ಹಿಂಸೆಗೆ ಹೆದರಿದ್ದಳೋ, ಅದೇ ಕ್ರೌರ್ಯ, ದ್ವೇಷದ ಮುಷ್ಠಿಯಲ್ಲಿ ನಲುಗಿಹೋದಳು. ಹಿಟ್ಲರನ ಕಾನ್ಸಂಟ್ರೇಶನ್ ಕ್ಯಾಂಪ್‍ನಲ್ಲಿ ಏಳು ತಿಂಗಳುಗಳು ಕಾಲ ತಾನು ಅನುಭವಿಸಿದ ಯಾತನೆ, ನೋವುಗಳನ್ನು ಹಂಚಿಕೊಳ್ಳಲು ಆನ್ ಫ್ರಾಂಕಳ ಜೊತೆ ಅವಳ ಆತ್ಮೀಯ `ಕಿಟ್ಟಿ’ ಇರಲಿಲ್ಲ. ಯಾವ ಕ್ಯಾಂಪಿನ ಬದುಕು ಅತ್ಯಂತ ಕಠೋರ, ಅಮಾನವೀಯ ಎಂದುಕೊಂಡಿದ್ದಳೋ, ಅದೇ ಕ್ಯಾಂಪಿನಲ್ಲಿ ಕಳೆದ ದಿನಗಳ ಹಿಂಸೆಯ ಅನುಭವವನ್ನು ದಾಖಲಿಸಲು ಹಾಗೂ ಬರಹದ ಮೂಲಕ ಬದುಕಲು ಧೈರ್ಯವನ್ನು ಪುನಃಶ್ಚೇತನಗೊಳಿಸಿಕೊಳ್ಳಲು ಆನ್ ಫ್ರಾಂಕ್‍ಳಿಗೆ ಅವಕಾಶವೇ ಸಿಗಲಿಲ್ಲ.

            ಫ್ರಾಂಕ್ ಕುಟುಂಬ ಅವಿತುಕೊಂಡಿದ್ದ ಮನೆಗೆ ದಾಳಿ ಮಾಡಿ ಸಿಕ್ಕ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದ ನಾತ್ಸಿಗಳ ಕೈಗೆ ಆನ್ ಫ್ರಾಂಕಳ ದಿನಚರಿ ಸಿಕ್ಕಿರಲಿಲ್ಲ. ಹಳೆಯ ಪುಸ್ತಕ-ಪತ್ರಿಕೆಗಳ ರಾಶಿಯಲ್ಲಿ ಬಿದ್ದಿದ್ದ ದಿನಚರಿ ಹಾಗೂ ಅವಳು ಬರೆದಿದ್ದ ಇನ್ನಿತರ ಕತೆ, ಲೇಖನಗಳನ್ನು ಡಚ್ ಗೆಳತಿಯಾದ ಮೀಪ್ ತೆಗೆದಿಟ್ಟಿದ್ದು ಅವಳ ತಂದೆ ವಾಪಸ್ಸಾದಾಗ ಆತನಿಗೆ ಕೊಟ್ಟರು. ಅವಳ ದಿನಚರಿ `ದ ಡೈರಿ ಆಫ್ ಎ ಯಂಗ್ ಗರ್ಲ್’ ಹೆಸರಿನಲ್ಲಿ ಪ್ರಕಟವಾಗಿ ಜಗತ್ಪ್ರಸಿದ್ಧವಾಯಿತು.

            `ನನ್ನ ಸಾವಿನ ನಂತರವೂ ಜೀವಿಸಿರಬೇಕು’ ಎಂದ ಆನ್ ಫ್ರಾಂಕ್ ಇಂದು ತನ್ನ ಮನದಾಳದ ಮಾತುಗಳನ್ನು ಹಂಚಿಕೊಂಡ `ಕಿಟ್ಟಿ’ಯಿಂದಾಗಿ ಇಂದಿಗೂ ನೆನಪುಗಳಲ್ಲಿ ಜೀವಂತವಿದ್ದಾಳೆ.

            ಆನ್ ಫ್ರಾಂಕ್‍ಳ ಕುಟುಂಬಕ್ಕೆ ನೆರವಾದ ಮೀಪ್ 2010ರಲ್ಲಿ ತನ್ನ ನೂರನೇ ವರ್ಷದಲ್ಲಿ ತೀರಿಕೊಂಡಳು. ಆಕೆ ಅವರು ಅವಿತುಕೊಂಡಿರುವಾಗ ಅವರಿಗೆ ಬ್ರೆಡ್, ತರಕಾರಿ ಮುಂತಾದುವನ್ನು ಪೂರೈಸುತ್ತಿದ್ದವಳು. ಅಷ್ಟಾದರೂ ಆಕೆ ಕೊನೆಯ ದಿನಗಳಲ್ಲಿ ತನ್ನ ಸಹಾಯ ಅಷ್ಟು ಮಹತ್ವದ್ದೇನಲ್ಲ, ಯೆಹೂದಿಗಳ ರಕ್ಷಣೆಗೆ ಹಾಲೆಂಡಿನಲ್ಲಿ ಇನ್ನೂ ಹೆಚ್ಚಿನ ಸಹಾಯ ಮಾಡಿದವರಿದ್ದಾರೆ ಎಂದಿದ್ದಳು. ಅಷ್ಟಲ್ಲದೆ ಆಕೆ ಆನ್ ಫ್ರಾಂಕಳ ದಿನಚರಿಯ `ರಾಯಭಾರಿ’ಯೂ ಆದಳು. ಆ ದಿನಚರಿಯ ಬಗೆಗೆ ವಿವರಣೆ ನೀಡುತ್ತಾ, ನಾತ್ಸಿಗಳ `ನರಮೇಧ’ವನ್ನು ವಿರೋಧಿಸಿ ಮಾತನಾಡುತ್ತಿದ್ದಳು. 1998ರಲ್ಲಿ ಸಂದರ್ಶನವೊಂದರಲ್ಲಿ ಆಕೆ ಆನ್ ಮತ್ತು ಇತರ ಏಳು ಜನರಿಗೆ ರಕ್ಷಣೆ ನೀಡಿದ್ದು ಒಂದು `ಸಹಜ ಕ್ರಿಯೆ’ಯಾಗಿತ್ತಷ್ಟೆ ಎಂದಿದ್ದಳು. `ಅವರು ನಿಸ್ಸಹಾಯಕರಾಗಿದ್ದರು, ಎಲ್ಲಿಗೂ ಹೋಗಲು ಅವರಿಗೆ ಸಾಧ್ಯವಿರಲಿಲ್ಲ, ಯಾರಿಂದಲೂ ಸಹಾಯ ಪಡೆಯುವ ಸ್ಥಿತಿಯಲ್ಲಿರಲಿಲ್ಲ... ನಾವು ಮನುಷ್ಯರಂತೆ ನಮ್ಮ ಕರ್ತವ್ಯ ನಿರ್ವಹಿಸಿದೆವು: ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದೆವು’ ಎಂದು ಹೇಳಿದ್ದಳು. ಆ ಸಮಯದಲ್ಲಿ ಆಕೆ ನಾತ್ಸಿಗಳ ಕೈಗೆ ಸಿಕ್ಕಿಹಾಕಿಕೊಂಡಿದ್ದರೆ ಆಕೆಗೂ ಸಾವು ಕಾದಿರುತ್ತಿತ್ತು ಎಂಬುದು ಬೇರೆ ಮಾತು.